ನ್ಯೂಯಾರ್ಕ್( ಅಮೆರಿಕ):ನ್ಯೂಯಾರ್ಕ್ನ ಬ್ರಾಂಕ್ಸ್ ಕಂಟ್ರಿಯಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿರುವುದರ ಬಗ್ಗೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ದಾಳಿಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ.
ವರದಿಗಳ ಪ್ರಕಾರ, ಸೋಮವಾರ ಸಂಜೆ 4:30 ರ ಸುಮಾರಿಗೆ (ಸ್ಥಳೀಯ ಸಮಯ) ಅಧಿಕಾರಿಗಳು ಮೌಂಟ್ ಈಡನ್ ಅವೆನ್ಯೂ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದೆವು. ಈ ವೇಳೆ ಆರು ಮಂದಿ ಗುಂಡು ಹಾರಿಸಿರುವುದು ಪತ್ತೆಯಾಗಿದೆ ಎಂದು ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆ (NYPD) ಟ್ರಾನ್ಸಿಟ್ ಮುಖ್ಯಸ್ಥ ಮೈಕೆಲ್ ಎಂ. ಕೆಂಪರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಗುಂಡಿನ ದಾಳಿಯ ನಂತರ ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಮತ್ತು ಸೇಂಟ್ ಬರ್ನಾಬಾಸ್ ಆಸ್ಪತ್ರೆಯಲ್ಲಿ 34 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈಲಿನೊಳಗೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದೆ. ಬಳಿಕ ಸಬ್ವೇ ಸ್ಟೇಷನ್ನಲ್ಲಿ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿಕೋರರ ಗುರುತು ಪತ್ತೆಯಾಗಿಲ್ಲ ಎಂದು ಕೆಂಪರ್ ಹೇಳಿದರು.