ಲಾಸ್ ಏಂಜಲೀಸ್, ಅಮೆರಿಕ: ಯುನೈಟೆಡ್ ಸ್ಟೇಟ್ನ ಎರಡನೇ ಅತಿದೊಡ್ಡ ನಗರ ಲಾಸ್ ಏಂಜಲೀಸ್ನಲ್ಲಿ ಹರಡುತ್ತಿರುವ ಕಾಳ್ಗಿಚ್ಚಿಗೆ ತಮ್ಮ ಮನೆಗಳು ಆಹುತಿಯಾಗುತ್ತಿರುವುದನ್ನು ಕಂಡ ಅನೇಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ದುರಂತದಲ್ಲಿ 13 ಮಿಲಿಯನ್ ಜನರು ಸ್ಥಳಾಂತಗೊಂಡಿದ್ದು, ಇದೀಗ ಬೆಂಕಿಯಲ್ಲಿ ಸುಟ್ಟು ಕರಕಲಾದ ಮನೆಗಳನ್ನು ಕಂಡು ಮರಗುತ್ತಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ.
ಕಳೆದ ಏಂಟು ತಿಂಗಳಿನಿಂದ ಮಳೆ ಕಾಣದ ಲಾಸ್ ಏಂಜಲೀಸ್ನಲ್ಲಿ ಶುಕ್ರವಾರ ಬೆಂಕಿ ಆರಿಸುವ ಪ್ರಕ್ರಿಯೆಗೆ ಗಾಳಿ ಶಾಂತವಾಗುವ ಮೂಲಕ ಕೊಂಚ ಸಹಾಯ ಮಾಡಿತು. ಪಾಲಿಸೇಡ್ನ ಪೂರ್ವ ಭಾಗದಲ್ಲಿ ಬೆಂಕಿ ಕೆನ್ನಾಲಿಗೆ ಹರಡಿದ್ದು ಶುಕ್ರವಾರ ಸಂಜೆ ಕೂಡ ಸ್ಥಳಾಂತರ ಕೆಲಸ ಮುಂದುವರೆದಿದೆ.
ಅಲ್ಟಡೆನಾನಲ್ಲಿ ಬೆಂಕಿ ಕೆನ್ನಾಲಿಗೆ ಕಾಣಿಸಿಕೊಂಡು ತಮ್ಮ ಮನೆ ಕೂಡ ಆಹುತಿಯಾಗುವುದನ್ನು ಕಂಡ ಬ್ರಿಡ್ಗೆಟ್ ಬರ್ಗ್, ಎರಡು ದಿನದ ಬಳಿಕ ಕುಟುಂಬದೊಂದಿಗೆ ಮನೆಯಿದ್ದ ಸ್ಥಳಕ್ಕೆ ಮರಳಿದ್ದಾರೆ. ಇಲ್ಲಿ ಆಕೆ ತನ್ನ ಮನೆಯ ನೆನಪುಗಳನ್ನು ಮೆಲುಕು ಹಾಕಿದ್ದು, ಕಂಬನಿ ಮಿಡಿದಿದ್ದಾರೆ.
ಎಲ್ಎಯಿಂದ 25 ಮೈಲಿವರೆಗೆ ಹರಡಿರುವ ಕಾಳ್ಗಿಚ್ಚಿನಿಂದ ಮನೆ, ಅಪಾರ್ಟ್ಮೆಂಟ್ ಕಟ್ಟಡ, ಉದ್ಯಮ ಸೇರಿದಂತೆ 12,000ಕ್ಕೂ ಹೆಚ್ಚು ಕಟ್ಟಡಗಳು, ಹಲವು ಕಾರುಗಳು ಸುಟ್ಟು ಕರಕಲಾಗಿದ್ದು, ಈ ಭೀಕರ ಕಾಳ್ಗಿಚ್ಚಿಗೆ ಕಾರಣವನ್ನು ಯಾರು ಕೂಡ ಪತ್ತೆ ಮಾಡಿಲ್ಲ.
ನಾಯಕತ್ವದ ವೈಫಲ್ಯದ ಕುರಿತು ಆರೋಪ ಕೇಳಿ ಬಂದಿದ್ದು, ರಾಜಕೀಯ ಟೀಕೆಗಳಿಗೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಸಾಗಿದೆ. ಗವರ್ನರ್ ಗವಿನ್ ನ್ಯೂಸಮ್ ಶುಕ್ರವಾರ, ದೀರ್ಘ ತೊಂದರೆಗೆ ಕಾರಣವಾಗುತ್ತಿರುವ ಈ ಕಾಳ್ಗಿಚ್ಚನ್ನು ನಂದಿಸಲು ಸುಮಾರು 117 ಮಿಲಿಯನ್ ಗ್ಯಾಲನ್ ನೀರನ್ನು ಅಣೆಕಟ್ಟುಗಳಿಂದ ಬಳಸುವಂತೆ ಆದೇಶಿಸಿದ್ದಾರೆ.