ಢಾಕಾ(ಬಾಂಗ್ಲಾದೇಶ): ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಅವರನ್ನು ಅಪಹರಿಸಿ ಹತ್ಯೆಗೈಯಲು ವಿಫಲ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ದೇಶದ ಪ್ರಮುಖ ಪತ್ರಿಕಾ ಸಂಪಾದಕರೊಬ್ಬರನ್ನು ಬಾಂಗ್ಲಾದೇಶದ ನ್ಯಾಯಾಲಯವೊಂದು ಸೋಮವಾರ ಖುಲಾಸೆಗೊಳಿಸಿದೆ. 2015ರಲ್ಲಿ ಅಮೆರಿಕದಲ್ಲಿ ಸಜೀಬ್ ಅವರನ್ನು ಕೊಲ್ಲುವ ಯತ್ನ ಮಾಡಲಾಗಿತ್ತು.
ಢಾಕಾದ 4ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ತಾರಿಕ್ ಅಜೀಜ್ ಅವರು ಈ ತೀರ್ಪು ನೀಡಿದ್ದು, ಈ ಪ್ರಕರಣದಲ್ಲಿ ತನ್ನ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಮಹಮುದುರ್ ರೆಹಮಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಅವರು ಅಂಗೀಕರಿಸಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ಮೇಲ್ಮನವಿದಾರರ ವಿರುದ್ಧ ಹೊರಿಸಲಾದ ಆರೋಪಗಳು ಸುಳ್ಳು ಮತ್ತು ಕಪೋಲಕಲ್ಪಿತವಾಗಿವೆ ಎಂದು ಕಂಡುಬಂದಿದೆ ಎಂದು ನ್ಯಾಯಾಧೀಶರು ಹೇಳಿದರು. ಹೀಗಾಗಿ ವಿಚಾರಣಾ ನ್ಯಾಯಾಲಯವು ಅವರಿಗೆ ವಿಧಿಸಿದ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದ್ದು, ಮೇಲ್ಮನವಿದಾರನನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತೀರ್ಪಿನ ನಂತರ ಮಾತನಾಡಿದ, ಅಮರ್ ದೇಶ್ ದಿನಪತ್ರಿಕೆಯ ಸಂಪಾದಕ ಮಹಮದೂರ್, ಅಂತಿಮವಾಗಿ ನ್ಯಾಯಾಲಯದಿಂದ ನ್ಯಾಯ ಸಿಕ್ಕಿದ್ದು, ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಕಳೆದ ವರ್ಷ ಆಗಸ್ಟ್ 17 ರಂದು ಢಾಕಾ ನ್ಯಾಯಾಲಯವು ಅವರ ಅನುಪಸ್ಥಿತಿಯಲ್ಲಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಹಿರಿಯ ಪತ್ರಕರ್ತ ಶಫೀಕ್ ರೆಹಮಾನ್, ಜತಿಯಾತಾಬಾದಿ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯ ಉಪಾಧ್ಯಕ್ಷ ಮುಹಮ್ಮದ್ ಉಲ್ಲಾ ಮಾಮುನ್, ಅವರ ಪುತ್ರ ರಿಜ್ವಿ ಅಹ್ಮದ್ ಸೀಸರ್ ಮತ್ತು ಅಮೆರಿಕ ಮೂಲದ ಉದ್ಯಮಿ ಮಿಜಾನುರ್ ರಹಮಾನ್ ಭುಯಿಯಾನ್ ಅವರಿಗೂ ಇದೇ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಐದೂವರೆ ವರ್ಷಗಳ ಕಾಲ ದೇಶಭ್ರಷ್ಟರಾಗಿದ್ದ ಮಹಮುದೂರ್ ಕಳೆದ ವರ್ಷ ಸೆಪ್ಟೆಂಬರ್ 27ರಂದು ಬಾಂಗ್ಲಾದೇಶಕ್ಕೆ ಮರಳಿದ್ದರು. ಎರಡು ದಿನಗಳ ನಂತರ, ಅವರು ಢಾಕಾದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗಿದ್ದರು ಮತ್ತು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. 2015ರ ಆಗಸ್ಟ್ 3ರಂದು ದಾಖಲಾದ ಪ್ರಕರಣದಲ್ಲಿ ಮಹಮುದೂರ್ ಮತ್ತು ಶಫೀಕ್ ರೆಹಮಾನ್ ಅವರನ್ನು ಬಂಧಿಸಲಾಗಿತ್ತು.
ದೂರಿನ ಪ್ರಕಾರ, ಮಾಮುನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಹಿರಿಯ ನಾಯಕರು ಯುಕೆ, ಯುಎಸ್ ಮತ್ತು ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಸಂಚು ರೂಪಿಸಿ ಶೇಖ್ ಹಸೀನಾ ಅವರ ಸಲಹೆಗಾರರಾಗಿದ್ದ ಜಾಯ್ ಅವರನ್ನು ಅಪಹರಿಸಿ ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪತ್ರಿಕೆ ತಿಳಿಸಿದೆ.