ನವದೆಹಲಿ:ಚೀನಾ ಮತ್ತು ಭಾರತ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಸರಿದಾರಿಗೆ ತರಲು ಇದು ಸೂಕ್ತ ಸಮಯವಾಗಿದೆ ಎಂದು ಚೀನಾದ ಪ್ರಮುಖ ಇಂಗ್ಲಿಷ್ ಭಾಷಾ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿರುವ ಸಮಯದಲ್ಲಿ ಚೀನಾ ಮಾಧ್ಯಮದ ಹೇಳಿಕೆ ಕುತೂಹಲ ಮೂಡಿಸಿದೆ.
"ಉಭಯ ದೇಶಗಳು ಉತ್ತಮ ನಂಬಿಕೆಯೊಂದಿಗೆ ಮಾತುಕತೆಗಳ ಮೂಲಕ ವಿವಾದವನ್ನು ಪರಿಹರಿಸುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕು. ಆ ಉದ್ದೇಶ ಸಾಧನೆಗಾಗಿ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ತಮ್ಮ ನಿಕಟ ಸಂಪರ್ಕವನ್ನು ಮುಂದುವರೆಸಿಕೊಂಡು ಹೋಗಬೇಕು ಮತ್ತು ತಮ್ಮ ಗಡಿ ವಿವಾದದ ಲಾಭ ಪಡೆಯಲು ಯಾವುದೇ ಬಾಹ್ಯ ಶಕ್ತಿಗೆ ಅವಕಾಶ ನೀಡಬಾರದು" ಎಂದು ಸರ್ಕಾರಿ ಸ್ವಾಮ್ಯದ 'ಚೀನಾ ಡೈಲಿ' ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
ಎರಡೂ ನೆರೆಹೊರೆಯ ದೇಶಗಳಾಗಿದ್ದು, ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾಗಿ ಚೀನಾ ಮತ್ತು ಭಾರತಗಳು ಭಿನ್ನಾಭಿಪ್ರಾಯಗಳಿಗಿಂತ ಹೆಚ್ಚು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ ಎಂದು ಒತ್ತಿ ಹೇಳಿರುವ ಸಂಪಾದಕೀಯವು ನವದೆಹಲಿ ಮತ್ತು ಬೀಜಿಂಗ್ ನಡುವೆ ಬಿರುಕು ಮೂಡಿಸಲು ಕೆಲ ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸುತ್ತಿವೆ ಎಂದು ದೂಷಿಸಿದೆ.
"ಗಡಿ ವಿವಾದ ಭುಗಿಲೆದ್ದಿರುವ ಮಧ್ಯೆ ಭಾರತ ಸರ್ಕಾರವು 2020 ರಿಂದ ಚೀನಾದ ಕಂಪನಿಗಳು, ಹೂಡಿಕೆಗಳು ಮತ್ತು ಆಮದುಗಳನ್ನು ಗುರಿಯಾಗಿಸಿಕೊಂಡು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೆ ತರುತ್ತಿದ್ದರೂ ದ್ವಿಪಕ್ಷೀಯ ವ್ಯಾಪಾರ ಪ್ರಮಾಣವು ಗಣನೀಯ ಮತ್ತು ಸ್ಥಿರವಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿ 120 ಬಿಲಿಯನ್ ಡಾಲರ್ ಮತ್ತು 130 ಬಿಲಿಯನ್ ಡಾಲರ್ ನಡುವೆಯೇ ಸ್ಥಿರವಾಗಿದೆ. ಇದನ್ನು ನೋಡಿದರೆ ನವದೆಹಲಿಯು ಪಾಶ್ಚಿಮಾತ್ಯ ರಾಷ್ಟ್ರಗಳ ಮಾತನ್ನು ಕಿವಿಗೆ ಹಾಕಿಕೊಳ್ಳಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಅದು ಹೇಳಿದೆ.