ವಿಶ್ವಸಂಸ್ಥೆ: ಸ್ವತಃ ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿರುವ ಪಾಕಿಸ್ತಾನ, ತಾನು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದಾಗಿ ಹೇಳಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಭಾರತ ಹೇಳಿದೆ.
20 ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳಿಗೆ ಪಾಕ್ ಆಶ್ರಯ: ಪಾಕಿಸ್ತಾನವು ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದುವಾಗಿದೆ. ಯುಎನ್ ಪಟ್ಟಿ ಮಾಡಿದ 20 ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುತ್ತಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಸರ್ಕಾರಿ ಬೆಂಬಲ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಮಂಗಳವಾರ ಭದ್ರತಾ ಮಂಡಳಿ ಸಭೆಯಲ್ಲಿ ಹೇಳಿದರು. "ಹೀಗಿರುವಾಗ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದಾಗಿ ಪಾಕಿಸ್ತಾನವು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದು ಮಹಾನ್ ವಿಪರ್ಯಾಸ" ಎಂದು ಅವರು ಹೇಳಿದರು.
ಭಯೋತ್ಪಾದಕ ಕೃತ್ಯಗಳಿಗೆ ಭಾರತ ಬಲಿಪಶು: ಜೈಶ್ ಎ ಮೊಹಮ್ಮದ್ (ಜೆಎಂ) ಮತ್ತು ಹರ್ಕತ್ ಉಲ್ ಮುಜಾಹಿದೀನ್ (ಎಚ್ಯುಎಂ) ನಂತಹ ಭಯೋತ್ಪಾದಕ ಸಂಘಟನೆಗಳ ಮೂಲಕ ಈ ದೇಶವು ನಡೆಸುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಬಲಿಪಶುವಾಗಿದೆ ಎಂದು ಅವರು ಆರೋಪಿಸಿದರು.
ಕಾಶ್ಮೀರ ವಿವಾದ ಕೆದಕಿದ ಪಾಕ್ಗೆ ತಿರುಗೇಟು: ಕಾಶ್ಮೀರ ವಿವಾದವನ್ನು ಕೆದಕಿದ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಅವರಿಗೆ ತಿರುಗೇಟು ನೀಡಿದ ಹರೀಶ್, "ವಾಸ್ತವವಾಗಿ, ಪಾಕಿಸ್ತಾನವೇ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ" ಎಂದು ಹೇಳಿದರು.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ಮತ್ತೊಮ್ಮೆ ಭಾರತಕ್ಕೆ ತಮ್ಮ ಬದ್ಧತೆ ಸ್ಪಷ್ಟಪಡಿಸಿದ್ದಾರೆ ಎಂದು ಅವರು ಗಮನ ಸೆಳೆದರು. "ಜಮ್ಮು ಮತ್ತು ಕಾಶ್ಮೀರದ ಜನರು ಕಳೆದ ವರ್ಷವಷ್ಟೇ ಯಶಸ್ವಿ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ ಮತ್ತು ತಮ್ಮ ಸರ್ಕಾರವನ್ನು ಆಯ್ಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರ ಆಯ್ಕೆ ಯಾವುದು ಎಂಬುದು ಇದರಿಂದ ಸ್ಪಷ್ಟವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ಪಾಕಿಸ್ತಾನಕ್ಕಿಂತ ಭಿನ್ನವಾಗಿ ರೋಮಾಂಚಕ ಮತ್ತು ಬಲವಾಗಿದೆ" ಎಂದು ಅವರು ಹೇಳಿದರು.
ಸುಳ್ಳುಗಳು ವಾಸ್ತವ ಸತ್ಯಗಳನ್ನು ಬದಲಾಯಿಸವು: "ಪಾಕಿಸ್ತಾನವು ಹರಡುತ್ತಿರುವ ತಪ್ಪು ಮಾಹಿತಿ, ಸುಳ್ಳುಗಳ ಅಭಿಯಾನಗಳು ವಾಸ್ತವ ಸತ್ಯಗಳನ್ನು ಬದಲಾಯಿಸಲಾರವು" ಎಂದು ಪರ್ವತನೇನಿ ಹರೀಶ್ ತಿಳಿಸಿದರು.
ವಿಶ್ವಸಂಸ್ಥೆಯ ಯಾವುದೇ ಸಭೆಯಲ್ಲಿ ಯಾವುದೇ ಪ್ರಸ್ತುತತೆ ಇಲ್ಲದಿದ್ದರೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದು ಪಾಕಿಸ್ತಾನದ ಚಾಳಿಯಾಗಿದೆ. ಅದೇ ಚಾಳಿಯನ್ನು ಮುಂದುವರಿಸಿರುವ ಅದು ಈ ಬಾರಿ ಬಹುಪಕ್ಷೀಯತೆ ಮತ್ತು ಜಾಗತಿಕ ಆಡಳಿತವನ್ನು ಸುಧಾರಿಸುವ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಕೆದಕಿದೆ ಎಂದು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.