ಅಡೆನ್: ಯೆಮೆನ್ ರಾಜಧಾನಿ ಸನಾ ಮತ್ತು ಕೆಂಪು ಸಮುದ್ರದ ಬಂದರು ನಗರ ಹೊದೈದಾದಲ್ಲಿನ ಪ್ರಮುಖ ಮೂಲಸೌಕರ್ಯ ಮತ್ತು ಹೌತಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಹೌತಿ ಗುಂಪಿನ ನಿಯಂತ್ರಣದಲ್ಲಿರುವ ಪ್ರದೇಶಗಳಾದ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೆಜ್ಯಾಜ್ ವಿದ್ಯುತ್ ಸ್ಥಾವರದ ಮೇಲೆ ಈ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ಇದು ಮಾತ್ರವಲ್ಲದೇ ಹೊದೈದಾದಲ್ಲಿನ ಹಲವಾರು ಸ್ಥಳಗಳ ಮೇಲೆ ದಾಳಿ ನಡೆದಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೌತಿ ನಾಯಕ ಅಬ್ದುಲ್-ಮಲಿಕ್ ಅಲ್-ಹೌತಿ ಟಿವಿಯಲ್ಲಿ ಕಾಣಿಸಿಕೊಂಡು ಭಾಷಣ ಮಾಡುತ್ತಿರುವಾಗಲೇ ಇಸ್ರೇಲ್ ದಾಳಿ ನಡೆಸಿರುವುದು ಗಮನಾರ್ಹ. ಸನಾ ಮತ್ತು ಹೊದೈದಾವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ತೀವ್ರ ವಾಯು ದಾಳಿ ನಡೆಸಿದೆ ಎಂದು ಇಸ್ರೇಲ್ ನ ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ವರದಿ ಮಾಡಿದೆ.
ಹೌತಿ ಪ್ಲಾನ್ ಜಾರಿಯಾಗುವ ಮುನ್ನವೇ ತಿರುಗೇಟು:ಯೆಮೆನ್ ನಲ್ಲಿ ದೊಡ್ಡ ಸ್ಪೋಟದ ಸದ್ದು ಕೇಳಿ ಬಂದಿದ್ದು, ಕಟ್ಟಡಗಳ ಮೇಲೆ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆ ಆವರಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಕ್ಲಿಪ್ಗಳಲ್ಲಿ ಕಾಣಿಸಿದೆ. ಹೌತಿ ಪಡೆಗಳು ಇಸ್ರೇಲ್ ಮತ್ತು ಹಡಗು ಮಾರ್ಗಗಳ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಉದ್ದೇಶ ಹೊಂದಿರುವುದು ತಿಳಿದ ನಂತರ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ಮಾಧ್ಯಮಗಳು ತಿಳಿಸಿವೆ.
ಹೌತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಬಂದರುಗಳ ಮೇಲೆಯೇ ದಾಳಿ:ಇಸ್ರೇಲಿ ಯುದ್ಧ ವಿಮಾನಗಳು ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಹೌತಿ ಉಗ್ರರು ಬಳಸುವ ಮೂಲಸೌಕರ್ಯಗಳು ಮತ್ತು ಹೌತಿ ನಿಯಂತ್ರಿತ ಪ್ರದೇಶಗಳಲ್ಲಿರುವ ಹೆಜ್ಯಾಜ್ ಮತ್ತು ರಾಸ್ ಕನಾಟಿಬ್ ವಿದ್ಯುತ್ ಸ್ಥಾವರಗಳು ಮತ್ತು ಪಶ್ಚಿಮ ಕರಾವಳಿಯ ಹೊದೈಡಾ, ಸಾಲಿಫ್ ಮತ್ತು ರಾಸ್ ಕನಾಟಿಬ್ ಬಂದರುಗಳ ಮೇಲೆ ದಾಳಿ ನಡೆಸಿದವು. ಈ ಬಂದರುಗಳ ಮೂಲಕವೇ ಇರಾನ್ ಹೌತಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸೇರಿದಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಪ್ರಯಾಣಿಸಬೇಕಿದ್ದ ಯುಎನ್ ವಿಮಾನದ ಸಹಾಯಕ ಕ್ಯಾಪ್ಟನ್ ಸೇರಿದಂತೆ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಮಾನ್ಯತೆ ಪಡೆಯದ ಹೌತಿ ಸರ್ಕಾರದ ವಿದೇಶಾಂಗ ಸಚಿವ ಜಮಾಲ್ ಅಮೆರ್ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ದಾಳಿ ನಡೆದಾಗ ಡಬ್ಲ್ಯುಎಚ್ಒ ಮುಖ್ಯಸ್ಥರು ವಿಮಾನ ನಿಲ್ದಾಣದ ವಿಐಪಿ ಲಾಂಜ್ನಲ್ಲಿದ್ದರು ಎಂದು ಅಮೆರ್ ಹೇಳಿದರು.
ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಲ್-ದೈಲಾಮಿ ವಾಯುಪಡೆಯ ನೆಲೆಯೊಳಗೆ ನಿಲ್ಲಿಸಲಾಗಿದ್ದ ಫೈಟರ್ ಜೆಟ್ಗಳು ಮತ್ತು ಹೆಲಿಕಾಪ್ಟರ್ಗಳನ್ನು ಇಸ್ರೇಲಿ ವೈಮಾನಿಕ ದಾಳಿಗಳು ನಾಶಪಡಿಸಿವೆ ಎಂದು ಹೌತಿಗಳ ಅಧಿಕಾರಿಯೊಬ್ಬರು ಕ್ಸಿನ್ಹುವಾಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಜಪಾನ್ ಏರ್ಲೈನ್ಸ್ ಲಗೇಜ್ ಚೆಕ್-ಇನ್ ವ್ಯವಸ್ಥೆಯ ಮೇಲೆ ಸೈಬರ್ ದಾಳಿ: ವಿಮಾನ ಹಾರಾಟ ವಿಳಂಬ - JAPAN AIRLINES