ಕರ್ನಾಟಕ

karnataka

ETV Bharat / international

'ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ': ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಸೂಚನೆ - POLIO CERTIFICATE

ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಪೋಲಿಯೊ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ.

'ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ': ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಸೂಚನೆ
'ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ': ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಸೂಚನೆ (ians)

By ETV Bharat Karnataka Team

Published : 18 hours ago

ಇಸ್ಲಾಮಾಬಾದ್: ಸೌದಿ ಅರೇಬಿಯಾದೊಳಗೆ ಬರುವ ಪಾಕಿಸ್ತಾನಿ ಪ್ರಯಾಣಿಕರು ಪೋಲಿಯೊ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಿಸಿದೆ. ಈ ನಿರ್ದೇಶನ ಉಲ್ಲಂಘಿಸುವವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (ಜಿಎಸಿಎ) ಹೇಳಿದೆ.

ವಿಶ್ವದಲ್ಲಿ ಸದ್ಯ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಈ ಎರಡೇ ದೇಶಗಳಲ್ಲಿ ಪೋಲಿಯೊ ಇನ್ನೂ ಉಳಿದುಕೊಂಡಿದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಪೋಲಿಯೊ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. 2024ರಲ್ಲಿ ಅಲ್ಲಿ 68 ಪೋಲಿಯೊ ಪ್ರಕರಣಗಳು ವರದಿಯಾಗಿವೆ. ನಿರಂತರವಾಗಿ ಹಿಂಸಾಚಾರ ಪೀಡಿತ ಪ್ರದೇಶಗಳಾದ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನಗಳಲ್ಲಿ ಪೋಲಿಯೊ ಲಸಿಕೆ ಅಭಿಯಾನವನ್ನು ಬಹಿಷ್ಕರಿಸಲಾಗುತ್ತಿದೆ. ಅಲ್ಲದೆ ಪೋಲಿಯೊ ಲಸಿಕೆ ಹಾಕಲು ಬರುವ ಆರೋಗ್ಯ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ.

ಅಪರಾಧ, ವಂಚನೆ ಮತ್ತು ಭಿಕ್ಷಾಟನೆಯಲ್ಲಿ ಭಾಗಿಯಾಗುತ್ತಿರುವ ಆರೋಪದ ಮೇಲೆ ಈಗಾಗಲೇ ಹಲವಾರು ಗಲ್ಫ್ ದೇಶಗಳು ಪಾಕಿಸ್ತಾನಿಗಳಿಗೆ ವೀಸಾ ನಿಷೇಧ ಹೇರಿವೆ. ಏತನ್ಮಧ್ಯೆ ಸೌದಿ ಅರೇಬಿಯಾ ಸರ್ಕಾರ ಕೂಡ ಈಗ ಪಾಕಿಸ್ತಾನಿಗಳಿಗೆ ಪೋಲಿಯೊ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ.

ಏಳು ದೇಶಗಳಿಂದ ಗಡೀಪಾರು ಮಾಡಲಾದ 51 ಪಾಕಿಸ್ತಾನಿಗಳು ಬುಧವಾರ ಕರಾಚಿಗೆ ಬಂದಿಳಿದಿದ್ದಾರೆ. ಅಸಮರ್ಪಕ ಪ್ರಯಾಣ ದಾಖಲೆ ಹಾಗೂ ಇನ್ನಿತರ ಕಾರಣಗಳಿಗಾಗಿ ಮಂಗಳವಾರ ರಾತ್ರಿ ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ವಿಮಾನಗಳಿಂದ 30 ಪಾಕಿಸ್ತಾನಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ವಲಸೆ ಇಲಾಖೆಯ ಅಧಿಕಾರಿಗಳು ಜಿಯೋ ನ್ಯೂಸ್​ಗೆ ತಿಳಿಸಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ವೀಸಾಗಾಗಿ ಅರ್ಜಿ ಸಲ್ಲಿಸುವ ಪಾಕಿಸ್ತಾನಿಗಳು ಪೊಲೀಸರಿಂದ ಉತ್ತಮ ನಡತೆ ಪ್ರಮಾಣ ಪತ್ರ ಪಡೆದು ಸಲ್ಲಿಸುವಂತೆ ಈ ಹಿಂದೆ ಯುಎಇ ಕಡ್ಡಾಯಗೊಳಿಸಿತ್ತು.

ಸೌದಿ ಅರೇಬಿಯಾ ಹೊರತುಪಡಿಸಿ, ಯುಎಇ ಮತ್ತು ಇತರ ಗಲ್ಫ್ ರಾಷ್ಟ್ರಗಳು ಪಾಕಿಸ್ತಾನದ ಕನಿಷ್ಠ 30 ವಿವಿಧ ನಗರಗಳ ಜನರಿಗೆ ವೀಸಾ ನೀಡುವುದನ್ನು ಅನಿರ್ದಿಷ್ಟ ಕಾಲದವರೆಗೆ ನಿರ್ಬಂಧಿಸಿವೆ. ಪಾಕಿಸ್ತಾನಿ ಪ್ರಜೆಗಳು ಭಿಕ್ಷಾಟನೆ, ಕಳ್ಳಸಾಗಣೆ, ಮಾದಕವಸ್ತು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ ಮತ್ತು ಇತರ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಈ ಕ್ರಮ ಕೈಗೊಂಡಿವೆ.

ಗಲ್ಫ್ ದೇಶಗಳು ಮತ್ತು ನಗರಗಳು, ವಿಶೇಷವಾಗಿ ದುಬೈ ಮತ್ತು ಅಬುಧಾಬಿ ಲಕ್ಷಾಂತರ ಪಾಕಿಸ್ತಾನಿ ಪ್ರಯಾಣಿಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚು ಆದ್ಯತೆಯ ತಾಣಗಳಾಗಿವೆ. ಆದರೆ ನಿಷೇಧ ಮತ್ತು ಹೆಚ್ಚುತ್ತಿರುವ ವೀಸಾ ತಿರಸ್ಕಾರದ ನಂತರ, ಸತತ ಮೂರನೇ ವರ್ಷ ವಿಶ್ವದ ನಾಲ್ಕನೇ ಕೆಟ್ಟ ಸ್ಥಾನದಲ್ಲಿರುವ ಪಾಕಿಸ್ತಾನಿ ಪಾಸ್​ಪೋರ್ಟ್​ ನ ಸ್ಥಾನ ಮತ್ತಷ್ಟು ಕುಸಿದಿದೆ.

ಇದನ್ನೂ ಓದಿ : 2024ರಲ್ಲಿ ಥೈಲ್ಯಾಂಡ್​ಗೆ 35 ಮಿಲಿಯನ್ ಪ್ರವಾಸಿಗರ ಭೇಟಿ: 48 ಬಿಲಿಯನ್ ಡಾಲರ್ ಆದಾಯ - THAILAND TOURISM

ABOUT THE AUTHOR

...view details