ಢಾಕಾ, ಬಾಂಗ್ಲಾದೇಶ:ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಅನ್ನು ಬಾಂಗ್ಲಾದೇಶದ ಮಧ್ಯಂತರ ಸರಕಾರ ನಿಷೇಧಿಸಿದೆ. ಜುಲೈ - ಆಗಸ್ಟ್ ದಂಗೆಯ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಗುಂಪಿನ ಬೇಡಿಕೆಯ ಮೇರೆಗೆ 2009ರ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿ ಛಾತ್ರ ಲೀಗ್ ನಿಷೇಧಿಸಲಾಗಿದೆ.
ಭಯೋತ್ಪಾದನಾ ವಿರೋಧಿ ಕಾಯ್ದೆ 2009ರ ಸೆಕ್ಷನ್ 18 ರ ಉಪ-ವಿಭಾಗ (1) ರಲ್ಲಿ ಒದಗಿಸಲಾದ ಅಧಿಕಾರಗಳ ಅಡಿ ಸರ್ಕಾರವು ಬಾಂಗ್ಲಾದೇಶ ಅವಾಮಿ ಲೀಗ್ನ ಸಹೋದರ ಸಂಘಟನೆ ಬಾಂಗ್ಲಾದೇಶ್ ಛಾತ್ರ ಲೀಗ್ ಅನ್ನು ನಿಷೇಧಿಸಿದೆ ಎಂದು ಬಾಂಗ್ಲಾದೇಶ ಗೃಹ ಸಚಿವಾಲಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.
ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಏನಿದೆ?:"ಬಾಂಗ್ಲಾದೇಶ ಸ್ವತಂತ್ರವಾದ ನಂತರ ವಿವಿಧ ಸಮಯಗಳಲ್ಲಿ, ವಿಶೇಷವಾಗಿ ಕಳೆದ 15 ವರ್ಷಗಳ ಸರ್ವಾಧಿಕಾರಿ ಆಡಳಿತದ ಅವಧಿಯಲ್ಲಿ, ಬಾಂಗ್ಲಾದೇಶ ಅವಾಮಿ ಲೀಗ್ ನ ಸಹೋದರ ಸಂಘಟನೆಯಾದ ಬಾಂಗ್ಲಾದೇಶ ಛಾತ್ರ ಲೀಗ್ ಕೊಲೆಗಳು, ಚಿತ್ರಹಿಂಸೆ, ಸಾರ್ವಜನಿಕ ಕೋಣೆಗಳಲ್ಲಿ ಕಿರುಕುಳ, ವಸತಿ ನಿಲಯಗಳಲ್ಲಿ ಸೀಟುಗಳ ವ್ಯಾಪಾರ, ಗ್ಯಾಂಗ್ ದೌರ್ಜನ್ಯ, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಅಪಾಯಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ" ಎಂದು ಬಾಂಗ್ಲಾದೇಶ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.