ಕರ್ನಾಟಕ

karnataka

ETV Bharat / international

ಸೈನಿಕರಂತೆ ಗಸ್ತು ಕಾಯುವ ರೋಬೋಟ್ ತಯಾರಿಸಿದ ಆಸ್ಟ್ರೇಲಿಯಾ ಸೇನೆ - Uncrewed Robot - UNCREWED ROBOT

ಸೈನಿಕರಂತೆ ಯುದ್ಧದಲ್ಲಿ ಕೆಲಸ ಮಾಡಬಲ್ಲ ರೋಬೋಟ್​​​ ಆಸ್ಟ್ರೇಲಿಯಾ ತಯಾರಿಸಿದೆ.

ಸೈನಿಕರಂತೆ ಗಸ್ತು ಕಾಯುವ ರೋಬೊಟ್​
ಸೈನಿಕರಂತೆ ಗಸ್ತು ಕಾಯುವ ರೋಬೊಟ್​ (IANS)

By ETV Bharat Karnataka Team

Published : Sep 11, 2024, 3:55 PM IST

ಕ್ಯಾನ್ ಬೆರಾ (ಆಸ್ಟ್ರೇಲಿಯಾ): ಅಪಾಯಕಾರಿ ಪ್ರದೇಶಗಳಲ್ಲಿ ಸೈನಿಕರ ಬದಲಾಗಿ ಕೆಲಸ ಮಾಡುವ ಮತ್ತು ಅವರಂತೆ ಗಡಿಯಲ್ಲಿ ಕಣ್ಗಾವಲು ಇಡಬಲ್ಲ ಜಿಯುಎಸ್ (ಗ್ರೌಂಡ್ ಅನ್ ಕ್ರೂವ್ಡ್​ ಸಿಸ್ಟಮ್) ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಸಿಬ್ಬಂದಿ ರಹಿತ ರೋಬೋಟ್​ನ ಪ್ರಯೋಗಗಳನ್ನು ಆಸ್ಟ್ರೇಲಿಯಾ ಸೇನೆ ಪ್ರಾರಂಭಿಸಿದೆ.

"ಆಸ್ಟ್ರೇಲಿಯಾ ಸೇನೆಯ ಪ್ರಾದೇಶಿಕ ಪಡೆ ಕಣ್ಗಾವಲು ಗುಂಪು (ಆರ್​ಎಫ್ಎಸ್​ಜಿ) ಪಿಲ್ಬರಾ ರೆಜಿಮೆಂಟ್​ನ ಸೈನಿಕರು ಸಿಬ್ಬಂದಿಯಿಲ್ಲದ (ಮಾನವ ರಹಿತ) ರೋಬೋಟ್ ಅನ್ನು ಪರೀಕ್ಷಿಸುತ್ತಿದ್ದಾರೆ" ಎಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವಾಲಯ ಬುಧವಾರ ಪ್ರಕಟಿಸಿದೆ.

ಸಚಿವಾಲಯದ ಪ್ರಕಾರ, ಆಸ್ಟ್ರೇಲಿಯಾ ಅಭಿವೃದ್ಧಿಪಡಿಸಿದ ಈ ಕಣ್ಗಾವಲು ರೋಬೋಟ್ ಕ್ಯಾಮೆರಾಗಳು ಮತ್ತು ಸಂವೇದಕಗಳನ್ನು ಹೊಂದಿದ್ದು, ಬ್ಯಾಟರಿ ಶಕ್ತಿ ಬಳಸಿಕೊಂಡು ಸತತ 30 ದಿನಗಳವರೆಗೆ ನಿರಂತರ ಕಣ್ಗಾವಲು ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆನ್-ಬೋರ್ಡ್ ಲಿಕ್ವಿಡ್ ಫ್ಯೂಯಲ್ ಜನರೇಟರ್ ಇದ್ದು, ಬ್ಯಾಟರಿ ಕಡಿಮೆಯಾದಾಗ ಅದನ್ನು ರೀಚಾರ್ಜ್ ಮಾಡುತ್ತದೆ ಹಾಗೂ ಜಿಯುಎಸ್ ನ ಮಿಷನ್ ಅವಧಿಯನ್ನು ಮತ್ತಷ್ಟು ವಿಸ್ತರಿಸುತ್ತದೆ.

ತಂತ್ರಜ್ಞಾನ ಬಳಕೆಗೆ ಒತ್ತು:ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ರಕ್ಷಣಾ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಆಸ್ಟ್ರೇಲಿಯಾ ಸೇನೆಯ ಭವಿಷ್ಯದ ಭೂ ಯುದ್ಧದ ಮಹಾನಿರ್ದೇಶಕ ಬ್ರಿಗೇಡಿಯರ್ ಜೇಮ್ಸ್ ಡೇವಿಸ್ ಹೇಳಿದ್ದಾರೆ. ಆಸ್ಟ್ರೇಲಿಯಾ ಸೇನೆಯ 13 ನೇ ಎಂಜಿನಿಯರ್ ರೆಜಿಮೆಂಟ್ 2023 ರಲ್ಲಿ ತಲಿಸ್ಮಾನ್ ಸೇಬರ್ ಸಮರಾಭ್ಯಾಸ ಸೇರಿದಂತೆ ಹಲವಾರು ಯುದ್ಧ ಪರಿಸ್ಥಿತಿಗಳಲ್ಲಿ ಈ ರೋಬೋಟ್ ಅನ್ನು ಪರೀಕ್ಷಿಸಿದೆ.

"ಜಿಯುಎಸ್ ಚಲಿಸುವ ವಸ್ತುಗಳನ್ನು ಪತ್ತೆಹಚ್ಚುತ್ತದೆ ಮತ್ತು ಈ ಮಾಹಿತಿಯನ್ನು ರಿಮೋಟ್ ಆಪರೇಟರ್​ಗೆ ರವಾನಿಸುತ್ತದೆ. ಪ್ರತಿಕೂಲ ಪರಿಸರ ವ್ಯವಸ್ಥೆಯಲ್ಲಿ ಸೈನಿಕರ ಬದಲಾಗಿ ಕೆಲಸ ಮಾಡಬಲ್ಲ ಮತ್ತು ಹೆಚ್ಚಿನ ಪ್ರದೇಶದಲ್ಲಿ ಕಣ್ಗಾವಲು ಇಡುವ ಸಾಮರ್ಥ್ಯವನ್ನು ಜಿಯುಎಸ್ ಹೊಂದಿದೆ" ಎಂದು ಸಚಿವಾಲಯ ವಿವರಿಸಿದೆ.

ವನ್ಯ ಜೀವಿ ಸುರಕ್ಷತೆಗೂ ಬಳಕೆ:ಜಿಯುಎಸ್ ಅನ್ನು ಆರಂಭದಲ್ಲಿ ವಿಕ್ಟೋರಿಯಾದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಫೆಡರೇಶನ್ ಯೂನಿವರ್ಸಿಟಿಯ ಮೆಕಾಟ್ರಾನಿಕ್ಸ್ ಸಂಶೋಧಕರು ಅಭಿವೃದ್ಧಿಪಡಿಸಿದ್ದರು. ಆಫ್ರಿಕಾದ ವಿಶಾಲವಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಳನುಗ್ಗುವ ಬಂದೂಕುಧಾರಿಗಳಿಂದ ರೇಂಜರ್​ಗಳನ್ನು ರಕ್ಷಿಸುವ ಸಲುವಾಗಿ ಇದನ್ನು ತಯಾರಿಸಲಾಗಿತ್ತು. ಆದರೆ ನಂತರದಲ್ಲಿ ಆಸ್ಟ್ರೇಲಿಯಾ ಸೈನ್ಯವು ಈ ರೋಬೊಟ್​ ಅನ್ನು ವನ್ಯಜೀವಿ ಸುರಕ್ಷತೆಗಾಗಿ ಮಾತ್ರವಲ್ಲದೆ ಮಿಲಿಟರಿಯಲ್ಲಿ ಕೂಡ ಬಳಸಲು ನಿರ್ಧರಿಸಿತು ಎಂದು ವಿಶ್ವವಿದ್ಯಾಲಯವು 2022 ರಲ್ಲಿ ಹೇಳಿದೆ. ಕೆಲವೇ ದಿನಗಳಲ್ಲಿ ಈ ರೋಬೋಟ್​ ಸೈನ್ಯದಲ್ಲಿ ನಿಯೋಜನೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಗಾಜಾದ ಮನೆ ಮೇಲೆ ಇಸ್ರೇಲ್ ದಾಳಿ: 9 ಪ್ಯಾಲೆಸ್ಟೈನಿಯರ ಸಾವು - Israeli Airstrike On Gaza

For All Latest Updates

ABOUT THE AUTHOR

...view details