ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್'ನ ಪ್ರಮುಖ ಆಕರ್ಷಣೆ ಅಂದ್ರೆ ಅದು ಅಭಿನಯ ಚಕ್ರವರ್ತಿ ಸುದೀಪ್. ಕಿಚ್ಚನ ನಿರೂಪಣಾ ಶೈಲಿಗೇನೆ ಸಪರೇಟ್ ಫ್ಯಾನ್ ಬೇಸ್ ಇದೆ. ಬಹುಶಃ, ವಾರದ ಕಾರ್ಯಕ್ರಗಳನ್ನು ವೀಕ್ಷಿಸದವರೂ ಸಹ ಕಿಚ್ಚನ ಸಲುವಾಗಿ ವೀಕೆಂಡ್ ಎಪಿಸೋಡ್ಗಳನ್ನು ನೋಡುತ್ತಾರೆ ಅನ್ನೋದು ಹೆಚ್ಚಿನವರ ಅಭಿಪ್ರಾಯ. ವೇದಿಕೆಗೆ ಕಿಚ್ಚು ಹಚ್ಚೋ ಕಿಚ್ಚನ ಖಡಕ್ ಮಾತುಗಳನ್ನೇ ಕೇಳೋದೇ ಚಂದಾ ಅಂತಾರೆ ಫ್ಯಾನ್ಸ್. ಆದ್ರೆ ಬೇಸರದ ಸಂಗತಿ ಅಂದ್ರೆ ಈ ವಾರದ ಕಾರ್ಯಕ್ರಮಗಳನ್ನು ಸುದೀಪ್ ಅವರು ನಡೆಸಿಕೊಡುತ್ತಿಲ್ಲ.
ಕಾರಣ ನಿಮಗೆ ತಿಳಿದೇ ಇದೆ. ಇತ್ತೀಚೆಗಷ್ಟೇ ಸುದೀಪ್ ಅವರ ತಾಯಿ ನಿಧನರಾದರು. ಅಮ್ಮನ ಅಗಲಿಕೆಯ ನೋವಿನಲ್ಲಿರುವ ಸುದೀಪ್ ಅವರು ಈ ವಾರ ಪಂಚಾಯ್ತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿಲ್ಲ. ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮಗಳು ಈ ಎರಡು ದಿನಗಳ ಕಾಲ ಬರೋದಿಲ್ಲ. ಆದ್ರೆ ಅಭಿನಯ ಚಕ್ರವರ್ತಿ ಜಾಗಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಆಗಮಿಸಿದ್ದಾರೆ.
ಈಗಾಗಲೇ ಬಿಗ್ ಬಾಸ್ ರಿಲೀಸ್ ಮಾಡಿರುವ ''ದೊಡ್ಮನೆ ಬೊಂಬೆಗಳಿಗೆ ಕೀ ಕೊಡಲು ಬಂದ್ರು ಯೋಗರಾಜ್ ಭಟ್!'' ಕ್ಯಾಪ್ಷನ್ನ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ಭಟ್ರು ಯಾವ ರೀತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಅನ್ನೋದನ್ನು ನೋಡುವ ಕಾತರದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಕರಿದ್ದಾರೆ. ಈ ಪ್ರೋಮೋ ವೈರಲ್ ಆಗುತ್ತಿದ್ದಂತೆ, ವಾಹಿನಿ ಮತ್ತೊಂದು ಪ್ರೋಮೋ ಬಿಡುಗಡೆ ಮಾಡಿ ಆಡಿಯನ್ಸ್ನ ಕುತೂಹಲ ಕೆರಳಿಸಿದೆ. ಹೌದು, ''ಮನೆಯವರ ಅಭಿಪ್ರಾಯ ಕೇಳಿ ತಬ್ಬಿಬ್ಬಾದನಾ ಹನುಮಂತು?'' ಎಂಬ ಕ್ಯಾಪ್ಷನ್ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ.