ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಇಂದು ತೆಲುಗು ಚಿತ್ರೋದ್ಯಮಕ್ಕೆ ಬೆಂಬಲದ ಭರವಸೆ ನೀಡಿದ್ದು, ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇಂದು ಬಂಜಾರಾ ಹಿಲ್ಸ್‌ನಲ್ಲಿರುವ ತೆಲಂಗಾಣ ರಾಜ್ಯ ಪೊಲೀಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ತೆಲುಗು ನಟರು, ನಿರ್ಮಾಪಕರೊಂದಿಗೆ ನಡೆದ ಪ್ರಮುಖ ಸಭೆಯಲ್ಲಿ ಮುಖ್ಯಮಂತ್ರಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.
"ಪುಷ್ಪ: ದಿ ರೂಲ್" ಸ್ಪೆಷಲ್ ಶೋ ವೇಳೆ ಹೈದರಾಬಾದ್ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೋರ್ವರು ಸಾವನ್ನಪ್ಪಿದರು. ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಯ್ತು. ನಂತರ ಅದೇ ದಿನ ಜಾಮೀನು ಪಡೆದು ಮರುದಿನ ಜೈಲಿನಿಂದ ಅವರು ಹೊರಬಂದರು. ಬಂಧನದ ನಂತರ ಹಲವು ಊಹಾಪೋಹಗಳು, ಪ್ರಶ್ನೆಗಳು ಎದ್ದಿವೆ. ಕಾಲ್ತುಳಿತ ಪ್ರಕರಣ ವಿವಾದಕ್ಕೊಳಗಾಗಿದೆ. ಈ ಹಿನ್ನೆಲೆ, ಇಂದು ಸಭೆ ಹಮ್ಮಿಕೊಳ್ಳಲಾಗಿತ್ತು.
ಟಾಲಿವುಡ್‌ನ ನಿಯೋಗದ ನೇತೃತ್ವವನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (ಎಫ್‌ಡಿಸಿ) ಅಧ್ಯಕ್ಷ ದಿಲ್ ರಾಜು ವಹಿಸಿದ್ದರು. ಖ್ಯಾತ ನಟರಾದ ನಾಗಾರ್ಜುನ, ವರುಣ್ ತೇಜ್, ಸಾಯಿ ಧರಮ್ ತೇಜ್, ಕಲ್ಯಾಣ್ ರಾಮ್, ಶಿವ ಬಾಲಾಜಿ, ಅಡವಿ ಶೇಷ್, ನಿತಿನ್ ಮತ್ತು ವೆಂಕಟೇಶ್ ಉಪಸ್ಥಿತರಿದ್ದರು. ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳನ್ನು ನಿಯಂತ್ರಿಸಬೇಕು ಮತ್ತು ಸಿನಿಮಾ ಇಂಡಸ್ಟ್ರಿ ಜವಾಬ್ದಾರಿಯುತವಾಗಿರಬೇಕು ಎಂದು ಸಿಎಂ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
సినీ పరిశ్రమకు చెందిన ప్రముఖులతో భేటీ కావడం జరిగింది.
— Revanth Reddy (@revanth_anumula) December 26, 2024
సినీ పరిశ్రమ అభివృద్ధికి…
సమస్యల పరిష్కారానికి…
ప్రజా ప్రభుత్వ సహకారం ఉంటుందని
భరోసా ఇవ్వడం జరిగింది.
ఈ భేటీలో…డిప్యూటీ సీఎం శ్రీ మల్లు భట్టి విక్రమార్క, సినిమాటోగ్రఫీ శాఖ మంత్రి…శ్రీ కోమటిరెడ్డి వెంకట్… pic.twitter.com/K8pmJkpykX
ಸಿಎಂ ರೇವಂತ್ ರೆಡ್ಡಿ ಟ್ವೀಟ್: ತೆಲುಗಿನಲ್ಲಿ ಎಕ್ಸ್ ಪೋಸ್ಟ್ ಶೇರ್ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ, "ಚಿತ್ರರಂಗದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ಚಲನಚಿತ್ರೋದ್ಯಮದ ಅಭಿವೃದ್ಧಿ ಮತ್ತು ಸಮಸ್ಯೆಗಳ ಪರಿಹಾರದ ಬಗ್ಗೆ ಭರವಸೆ ನೀಡಲಾಯಿತು. ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಸಿನಿಮ್ಯಾಟೋಗ್ರಾಫಿ ಮಿನಿಸ್ಟರ್ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಎಫ್‌ಡಿಸಿ ಅಧ್ಯಕ್ಷ ಶ್ರೀ ದಿಲ್ ರಾಜು ಮತ್ತು ಇತರೆ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು" ಎಂದು ತಿಳಿಸಿದ್ದಾರೆ.
ಬುಧವಾರದಂದು, ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್‌ಡಿಸಿ)ದ ಅಧ್ಯಕ್ಷ ಮತ್ತು ಜನಪ್ರಿಯ ನಿರ್ಮಾಪಕ ದಿಲ್ ರಾಜು ಅವರು ಸರ್ಕಾರ ಮತ್ತು ಸಿನಿಮಾ ಇಂಡಸ್ಟ್ರಿಯ ನಡುವೆ "ಆರೋಗ್ಯಕರ ಸಂಬಂಧ"ವನ್ನು ಬೆಳೆಸಲು ನಿಯೋಗವು ಮುಖ್ಯಮಂತ್ರಿಯನ್ನು ತಲುಪಲಿದೆ ಎಂದು ತಿಳಿಸಿದ್ದರು.
ಇತಿಹಾಸ, ಸ್ವಾತಂತ್ರ್ಯ ಹೋರಾಟ ಅಥವಾ ಮಾದಕ ದ್ರವ್ಯ ವಿರೋಧಿ, ಸಂದೇಶ ಆಧಾರಿತ ಚಿತ್ರಗಳಂತಹ ಕೆಲ ವರ್ಗಗಳಿಗೆ ಮಾತ್ರ ರಾಜ್ಯ ಸರ್ಕಾರ ಭವಿಷ್ಯದಲ್ಲಿ ಟಿಕೆಟ್ ದರ ಏರಿಕೆಯನ್ನು ಪರಿಗಣಿಸಬಹುದು ಎಂಬ ಸಿನಿಮಾಟೋಗ್ರಫಿ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರ ಹೇಳಿಕೆಯು ಸಭೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಡಿಸೆಂಬರ್ 4ರ ರಾತ್ರಿ 'ಪುಷ್ಪ 2' ಸಿನಿಮಾದ ಪ್ರೀ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 35ರ ಹರೆಯದ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿದ ಹಿನ್ನೆಲೆ, ಸದ್ಯ ಸಭೆಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಸಚಿವರ ಹೇಳಿಕೆ ಜಾರಿಯಾದರೆ ಮುಂದಿನ ವರ್ಷ ಸಂಕ್ರಾಂತಿಯಂದು ಬಿಡುಗಡೆಯಾಗಲಿರುವ ಹೈ ಬಜೆಟ್ ಚಿತ್ರಗಳಾದ ರಾಮ್ ಚರಣ್ ಅವರ "ಗೇಮ್ ಚೇಂಜರ್", ನಂದಮೂರಿ ಬಾಲಕೃಷ್ಣ ಅವರ "ಡಾಕು ಮಹಾರಾಜ್" ಮತ್ತು ವೆಂಕಟೇಶ್ ಅವರ "ಸಂಕ್ರಾಂತಿಕಿ ವಸ್ತುನ್ನಂ" ಚಿತ್ರಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಇದನ್ನೂ ಓದಿ: ಮ್ಯಾಕ್ಸ್ ಭರ್ಜರಿ ಕಲೆಕ್ಷನ್: ಅದ್ಭುತ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸುದೀಪ್ ಸಿನಿಮಾ
ಜನಪ್ರಿಯ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರವನ್ನು ದಿಲ್ ರಾಜು ನಿರ್ಮಿಸಿದ್ದಾರೆ. ಸುಮಾರು 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಟಿಕೆಟ್ ದರ ನಿಗದಿ ಮೇಲೆ ಏನಾದರೂ ಕ್ರಮ ಕೈಗೊಂಡಿದ್ದೇ ಆದ್ರೆ ಬಿಗ್ ಬಜೆಟ್ ಸಿನಿಮಾಗಳ ಮೇಲೆ ಭಾರಿ ಪರಿಣಾಮ ಬೀರಲಿದೆ.
ಇದನ್ನೂ ಓದಿ: ಮೃತ ಅಭಿಮಾನಿಯ ಕುಟುಂಬಕ್ಕೆ ₹2 ಕೋಟಿ ನೆರವು ಘೋಷಿಸಿದ ಅಲ್ಲು ಅರ್ಜುನ್, ಪುಷ್ಪ 2 ತಂಡ
ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಅವರನ್ನು ನಗರ ಪೊಲೀಸರು ಬಂಧಿಸಿದ್ದರು. ತೆಲಂಗಾಣ ಹೈಕೋರ್ಟ್ ಅದೇ ದಿನ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಡಿಸೆಂಬರ್ 14ರಂದು ಬೆಳಗ್ಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. (Agency inputs).
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ್ರ ನಿವಾಸಕ್ಕೆ ತೆರಳಿ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್, ಧನ್ಯತಾ