ಭೋಪಾಲ್ (ಮಧ್ಯಪ್ರದೇಶ):ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ 'ಭೋಪಾಲ್ ನವಾಬ್' (ನವಾಬ) ಎಂಬ ಹೆಸರೀಗ ಸಂಕಷ್ಟದಲ್ಲಿದೆ. ಕಾನೂನು ವಿವಾದ ಹಿನ್ನೆಲೆ ಅವರು ಭೋಪಾಲ್ನಲ್ಲಿರುವ 15,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕುಟುಂಬದ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಆಸ್ತಿ ವಶಪಡಿಸಿಕೊಳ್ಳುವ ಸಾಧ್ಯತೆ?ಭೋಪಾಲ್ನ ಹಿಂದಿನ ಆಡಳಿತಗಾರರ ಆಸ್ತಿಯ ಹೆಚ್ಚಿನ ಭಾಗವನ್ನು ಈಗಾಗಲೇ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಕೆಲ ಭಾಗವನ್ನು ಭೋಪಾಲ್ ನವಾಬ್ ಕುಟುಂಬ ಸದಸ್ಯರು ಮಾರಾಟ ಮಾಡಿದ್ದಾರೆ. ಶತ್ರು ಆಸ್ತಿಗೆ ಸಂಬಂಧಿಸಿದ ವಿವಾದಗಳ ತೀರ್ಪಿಗಾಗಿ ಮೇಲ್ಮನವಿ ಪ್ರಾಧಿಕಾರವನ್ನು ರಚಿಸುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಈ ಹಿಂದೆ, ಕೇಂದ್ರ ಸರ್ಕಾರ ಪಟೌಡಿ ಕುಟುಂಬದ ಹಲವು ಐತಿಹಾಸಿಕ ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಘೋಷಿಸಿತ್ತು ಮತ್ತು ಮಧ್ಯಪ್ರದೇಶ ಹೈಕೋರ್ಟ್ 2015ರಲ್ಲಿ ಈ ಆಸ್ತಿಗಳ ಮೇಲೆ ವಿಧಿಸಲಾದ ತಡೆಯಾಜ್ಞೆ ತೆಗೆದುಹಾಕಿತ್ತು. ಇದೀಗ ಹೈಕೋರ್ಟ್ ಸೈಫ್ ಅವರಿಗೆ ಮೇಲ್ಮನವಿ ಪ್ರಾಧಿಕಾರ ಸಂಪರ್ಕಿಸುವಂತೆ ಸೂಚಿಸಿದೆ. ಇಲ್ಲದಿದ್ದರೆ ಸರ್ಕಾರವು ಅವರ ಕುಟುಂಬದ ಭೋಪಾಲ್ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆ 1968ರ ಅಡಿ ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ.
ಸೈಫ್ ನವಾಬ್ ಬಿರುದು ರದ್ದು? ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ಈಟಿವಿ ಭಾರತ್ ಭೋಪಾಲ್ನ ವಕೀಲರಾದ ಜಗದೀಶ್ ಛಾವಾನಿ ಮತ್ತು ಹಿಮಾಂಶು ರೈ ಅವರನ್ನು ಸಂಪರ್ಕಿಸಿತು. ಇವರು ಆಸ್ತಿ ವಿವಾದಗಳ ಮಾಹಿತಿ ಹೊಂದಿದ್ದಾರೆ. ವಕೀಲ ಹಿಮಾಂಶು ರೈ, "ಈ ಸಂಬಂಧ ಅಧಿಸೂಚನೆ ಹೊರಡಿಸುವವರೆಗೆ ಸೈಫ್ ಅಲಿ ಖಾನ್ ಅವರ ನವಾಬ್ ಬಿರುದನ್ನು ರದ್ದುಗೊಳಿಸಲಾಗುವುದಿಲ್ಲ" ಎಂದು ತಿಳಿಸಿದರು.
"ಈವರೆಗೂ, ಸೈಫ್ ಅಲಿ ಖಾನ್ ಭೋಪಾಲ್ ನವಾಬ್ ಎಂಬ ಬಿರುದನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬಿರುದು ಮತ್ತು ಆಸ್ತಿಯನ್ನು ಉಳಿಸಿಕೊಳ್ಳಲು ಅಥವಾ ಸಮರ್ಥಿಸಿಕೊಳ್ಳಲು ನ್ಯಾಯಯದ ಮೆಟ್ಟಿಲೇರಬಹುದು. ಸೈಫ್ ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಮತ್ತು ನ್ಯಾಯಾಲಯದ ಮುಂದೆ ತಮ್ಮ ಪರವಾಗಿ ವಾದ ಮಂಡಿಸಬಹುದು" ಎಂದು ಹಿಮಾಂಶು ರೈ ತಿಳಿಸಿದರು.
ಆಸ್ತಿಗೆ ಸಂಬಂಧಿಸಿದ ಮಾಹಿತಿ:1949ರಲ್ಲಿ, ಭೋಪಾಲ್ ರಾಜ್ಯವು ಭಾರತದ ಭಾಗವಾದಾಗ, ಭೋಪಾಲ್ ರಾಜ್ಯದ ಕೊನೆಯ ಬೇಗಂ ಸುಲ್ತಾನ್ ಜಹಾನ್ ಅವರ ಮಗ ಹಮೀದುಲ್ಹ್ಲಾ ಖಾನ್ ನವಾಬರಾದರು. ಭೋಪಾಲ್ ಗಡ್ಡಿ ಕಾಯ್ದೆ ಮತ್ತು ವಿಲೀನ ಒಪ್ಪಂದದ ಏಳನೇ ವಿಧಿಯ ಪ್ರಕಾರ, ನವಾಬ್ ಹಮೀದುಲ್ಹ್ಲಾ ಖಾನ್ ಮತ್ತು ಅವರ ನಂತರ ಅವರ ಹಿರಿಯ ಮಗು ಈ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಆದರೆ, ನವಾಬ್ ಹಮೀದುಲ್ಹ್ಲಾ ಖಾನ್ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದರು. ಮಗ ಇರಲಿಲ್ಲ. ಹಿರಿಯ ಮಗಳ ಹೆಸರು ಅಬಿದಾ, ನಂತರ ಸಾಜಿದಾ ಸುಲ್ತಾನ್ ಮತ್ತು ರಬಿಯಾ ಸುಲ್ತಾನ್.
ವಿಭಜನೆಯ ನಂತರ 1950ರಲ್ಲಿ ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ತೆರಳಿದರು, ನವಾಬ್ ಉತ್ತರಾಧಿಕಾರವನ್ನು ಅವರ ತಂಗಿ ಸಾಜಿದಾ ಸುಲ್ತಾನ್ ಅವರಿಗೆ ಬಿಟ್ಟುಕೊಟ್ಟರು. ಅವರನ್ನು 1961ರಲ್ಲಿ ಅಧಿಕೃತವಾಗಿ ನವಾಬ್ ಉತ್ತರಾಧಿಕಾರಿ ಎಂದು ಗುರುತಿಸಲಾಯಿತು. ಜನವರಿ 10, 1961ರಂದು, ಸಾಜಿದಾ ಸುಲ್ತಾನ್ ಅವರಿಗೆ ನವಾಬ್ ಎಂಬ ಬಿರುದನ್ನು ನೀಡಲಾಯಿತು.
ಸಾಜಿದಾ ಸುಲ್ತಾನ್ ಮರಣದ ನಂತರ, ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಉತ್ತರಾಧಿಕಾರಿಯಾದರು. ಅವರ ನಂತರ, ನಟ ಸೈಫ್ ಅಲಿ ಖಾನ್ 'ಭೋಪಾಲ್ ನವಾಬ್' ಎಂಬ ಬಿರುದನ್ನು ಪಡೆದರು. ಸುಮಾರು 15,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಮಾಲೀಕರಾದರು. ಸೈಫ್ ಅಲಿ ಖಾನ್ ಅವರು ಶರ್ಮಿಳಾ ಠಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಪುತ್ರ.