ಮೈಸೂರು: ಪ್ರಾಕೃತಿಕ ಅನಾಹುತಗಳೂ ಸೇರಿದಂತೆ ದೇಶವು ಈ ವರ್ಷ ಕಠಿಣ ದಿನಮಾನಗಳನ್ನು ಎದುರಿಸಬೇಕಾಗಬಹುದು. ಇದರಿಂದ ಪಾರಾಗಲು ಎಲ್ಲರೂ ದೈವಿಕ ಭಾವನೆ ಹೊಂದಬೇಕಾಗಿದೆ ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಇಂದು ಮಹಾಶಿವರಾತ್ರಿ ಪ್ರಯುಕ್ತ ಜನತೆಗೆ ಆಶೀರ್ವಚನ ನೀಡಿದ ಶ್ರೀಗಳು, ಈ ವರ್ಷ ಪ್ರಾಕೃತಿಕ ವಿಕೋಪ, ಯುದ್ಧ, ಅಪಮೃತ್ಯುಗಳು ಕಾಡಬಹುದು. ಶಿವನ ಕೃಪೆ ಇರುವುದರಿಂದ ಇವುಗಳು ಕಡಿಮೆಯಾದರೂ ಜನತೆ ದೈವದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಈ ಸಲ ಕುಂಭಮೇಳ ಅತ್ಯಂತ ಶುಭ ತರಿಸಿದೆ. ಅದರಲ್ಲೂ ಆಧ್ಯಾತ್ಮಿಕತೆ ಪ್ರಪಂಚಕ್ಕೆ ಒಳ್ಳೆಯ ಸಂದೇಶ ನೀಡಿದೆ. ದೇಶದ ಜನತೆ ಧಾರ್ಮಿಕತೆ ಬಗ್ಗೆ ಅತ್ಯಂತ ಶ್ರದ್ಧೆ ತೋರಿದ್ದಾರೆ. ಇದು ಅದೃಷ್ಟವೇ ಸರಿ. ಕುಂಭಮೇಳದಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ಯುವಜನರು ಪಾಲ್ಗೊಂಡಿದ್ದು ವಿಶೇಷ. ಅವರಲ್ಲಿ ಇದೀಗ ನಮ್ಮ ಧರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ. ಇದೂ ಕೂಡಾ ಒಳ್ಳೆಯ ವಿಚಾರ ಎಂದು ಶ್ರೀಗಳು ಸಂತಸಪಟ್ಟರು.
ಕುಂಭಮೇಳದ ದಿನಗಳಲ್ಲಿ ನಮ್ಮ ದೇಶ ಅಷ್ಟೇ ಅಲ್ಲದೇ, ಇಡೀ ಪ್ರಪಂಚಕ್ಕೆ ಒಳ್ಳೆಯದಾಗಲಿ ಅಂತ ಭಾರತ ಪ್ರಾರ್ಥಿಸಿದೆ. ನಮ್ಮ ವೇದ ಪದ್ಧತಿಯೂ ಸಹ ಇದನ್ನೇ ಬೋಧಿಸುತ್ತದೆ. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ. ಮುಂದಾಗುವ ಅನಾಹುತಗಳು ತಪ್ಪಬೇಕಾದರೆ ಯುವಜನರು ಸೇರಿದಂತೆ ಇಡೀ ದೇಶದ ಜನತೆ ಮತ್ತು ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದಿರಬೇಕು. ಆದಷ್ಟು ದೇವಸ್ಥಾನಗಳನ್ನು ದರ್ಶಿಸಬೇಕು. ಪುರಾತನ ಆಲಯಗಳನ್ನು ದರ್ಶನ ಮಾಡಬೇಕು. ದೇವಸ್ಥಾನಗಳ ಜೀರ್ಣೋದ್ಧಾರಗಳಾದರೆ ಇನ್ನೂ ಒಳಿತು ಎಂದು ಶ್ರೀಗಳು ಅಭಿಪ್ರಾಯಪಟ್ಟರು.