ದಾವಣಗೆರೆ: ನಗರದ ಕಾಯಿಪೇಟೆಯಲ್ಲಿರುವ ಶ್ರೀ ಪಾತಾಳಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿತ್ತು. ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವ ಪಾತಾಳದಲ್ಲಿ ನೆಲೆಸಿರುವುದು ಇಲ್ಲಿನ ವಿಶೇಷತೆ.
ಉತ್ತರ, ಈಶಾನ್ಯ ರಾಜ್ಯಗಳ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಶಿವರಾತ್ರಿ ಮತ್ತು ಸೋಮವಾರ ದೇವಸ್ಥಾನಕ್ಕೆ ಬಂದು ಬೇಡಿಕೊಂಡರೆ ಇಷ್ಟಾರ್ಥ ಸಿದ್ದಿಸುತ್ತದೆ ಎಂಬುದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಇಂದು ಸಾವಿರಾರು ಭಕ್ತರು ಪಾತಾಳಲಿಂಗೇಶ್ವರನ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.
"ಉತ್ತರ ಭಾರತದಲ್ಲಿ ಜ್ಯೋತಿರ್ಲಿಂಗಗಳಿದ್ದರೂ ಕೆಲ ಪಶ್ಚಿಮ ಹಾಗೂ ಈಶಾನ್ಯ ರಾಜ್ಯಗಳ ಭಕ್ತರು ದಾವಣಗೆರೆಯ ಪಾತಾಳೇಶ್ವರನ ದರ್ಶನಕ್ಕೆ ಆಗಮಿಸುತ್ತಾರೆ. ಶಿವರಾತ್ರಿಯಂದು ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರದಿಂದ ಭಕ್ತರು ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಷ್ಟಾರ್ಥ ಈಡೇರಿದ್ದರಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ" ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿಕುಮಾರ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಪಾತಾಳಲಿಂಗೇಶ್ವರ ಎಂಬ ಹೆಸರು ಬರಲು ಕಾರಣವೇನು?: "ಪಾತಾಳೇಶ್ವರ ಅಥವಾ ಪಾತಾಳಲಿಂಗೇಶ್ವರ ಎಂದು ಹೆಸರು ಬರಲು ಐತಿಹಾಸಿಕ ಕಾರಣವಿದೆ. ದೇವರು ಪಾತಾಳದಲ್ಲಿರುವ ದೇವಾಲಯದಲ್ಲಿ ನೆಲೆಸಿರುವುದರಿಂದ ಈ ಹೆಸರು ಬಂದಿದೆ. ಹಲವು ವರ್ಷಗಳ ಹಿಂದೆ ಪಾತಾಳದಲ್ಲಿರುವ ದೇವಾಲಯ ನೀರಿನಿಂದ ಆವೃತವಾಗಿತ್ತು. ಆ ಸಂದರ್ಭಗಳಲ್ಲಿ ಭಕ್ತರು ನೀರಿನಲ್ಲೇ ತೆರಳಿ ದೇವರ ದರ್ಶನ ಪಡೆದಿದ್ದರು. ಆದ್ದರಿಂದ ಪಾತಾಳೇಶ್ವರ, ಪಾತಾಳಲಿಂಗೇಶ್ವರ ಎಂಬ ಹೆಸರು ಬಂದಿದೆ" ಎಂದು ಅವರು ಮಾಹಿತಿ ನೀಡಿದರು.

"ಏನೇ ಸಮಸ್ಯೆ ಇರಲಿ, ಭಕ್ತಿಯಿಂದ ಬೇಡಿಕೊಂಡರೆ ಆ ಸಮಸ್ಯೆ ದೂರಾಗುತ್ತದೆ. ನನಗೂ ಎಲ್ಲಾ ರೀತಿಯಲ್ಲಿ ಒಳಿತಾಗಿದೆ. ನಾನು ಚಿಕ್ಕವನಾಗಿದ್ದಾಗ ದೇವಸ್ಥಾನದಲ್ಲಿ ದೀಪ ಹಚ್ಚುವುದು, ಕಸ ಗುಡಿಸುತ್ತಿದ್ದೆ. ಅದರಿಂದಲೂ ನನಗೆ ಒಳಿತಾಗಿದೆ. ಇಲ್ಲಿಗೆ ಭಕ್ತರು ಶಿವರಾತ್ರಿ ದಿನದಂದು ಭೇಟಿ ನೀಡುವುದನ್ನು ಮಾತ್ರ ತಪ್ಪಿಸುವುದಿಲ್ಲ" ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಾಶಿ ವಿಶ್ವನಾಥನ ದರ್ಶನ: ಮಾದರಿ ಶಿವಲಿಂಗ ನೋಡಲು ಹರಿದು ಬಂದ ಭಕ್ತಗಣ
ಇದನ್ನೂ ಓದಿ: ಶಿವಮೊಗ್ಗ ಈಶ್ವರವನದ ಪ್ರಕೃತಿ ಮಡಿಲಲ್ಲಿ ಶಿವಾರಾಧನೆ; ಅಳಿವಿನಂಚಿನಲ್ಲಿರುವ ಗಿಡ-ಮರಗಳ ಪೋಷಣೆ