ಹೈದರಾಬಾದ್: ಸೆಪ್ಟೆಂಬರ್ 18, ಕನ್ನಡ ಚಿತ್ರರಂಗದಲ್ಲಿ ವಿಶೇಷ ದಿನ ಅಂತಲೇ ಹೇಳಬಹುದು. ಇಂದು ಮೂವರು ಗಣ್ಯಾತಿಗಣ್ಯರ ಜನ್ಮದಿನದ ಸಂಭ್ರಮ. ಹೌದು, ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿದ ದಿನ. ವಿಷ್ಣುದಾದಾ ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಸದಾ ಜೀವಂತ. ಈ ವಿಶೇಷ ದಿನವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
'ಯುಐ' ಪೋಸ್ಟರ್ ರಿಲೀಸ್: ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ನಟ ನಿರ್ದೇಶಕ ಎಂದೇ ಪ್ರಸಿದ್ಧಿ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ 56ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಯುಐ' ಪೋಸ್ಟರ್ ಅನಾವರಣಗೊಳಿಸಿ ನಟನಿಗೆ ವಿಶೇಷವಾಗಿ ಶುಭಾಶಯ ಕೋರಿದೆ. ಪೋಸ್ಟರ್ನಲ್ಲಿ ನಟ ಕುದುರೆಯೇರಿ ಕುಳಿತಿದ್ದು, ಅಭಿಮಾನಿಗಳ ಸಿನಿಮಾ ನೋಡುವ ಕುತೂಹಲವನ್ನು ಹೆಚ್ಚಿಸಿದೆ. ಪೋಸ್ಟ್ಗೆ, ''ಯುಐ - ಹಿಸ್ಟರಿ ಇನ್ ದಿ ಮೇಕಿಂಗ್, ಅಕ್ಟೋಬರ್ಗೆ ಸಿನಿಮಾ ಬಿಡುಗಡೆ'' ಎಂಬ ಕ್ಯಾಪ್ಷನ್ ಕೊಡಲಾಗಿದೆ. ಬಹು ನಿರೀಕ್ಷಿತ ಚಿತ್ರ ಅಕ್ಟೋಬರ್ಗೆ ತೆರೆಕಾಣಲಿದ್ದು, ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ.
ಇಂದು ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನ ಕೂಡಾ ಹೌದು. ಮೇರುನಟನ ಅದ್ಭುತ ಫೋಟೋ ಹಂಚಿಕೊಂಡಿರುವ ಉಪೇಂದ್ರ, ''ಕರುನಾಡ ಸಿಂಹ, ಸಾಹಸಸಿಂಹ ಕರುಣಾಮಯಿ ನಿಮ್ಮ ಜನುಮದಿನ ಹಂಚಿಕೊಂಡ ನಾನು ಪುಣ್ಯವಂತ. ನಿಮ್ಮ ನೆನಪು ಸದಾ ನಮ್ಮೊಂದಿಗೆ'' ಎಂದು ಬರೆದುಕೊಂಡಿದ್ದಾರೆ.