ಕರ್ನಾಟಕ

karnataka

ETV Bharat / entertainment

'ಭೈರವನ ಕೊನೆ ಪಾಠ' ಹೇಳಲು ಬರುತ್ತಿದ್ದಾರೆ ಕರುನಾಡ ಚಕ್ರವರ್ತಿ: ಶಿವಣ್ಣನಿಗೆ ಹೇಮಂತ್ ಡೈರೆಕ್ಷನ್​​ - Bhairavana Kone PaaTa

ನಟ ಶಿವರಾಜ್​ಕುಮಾರ್ ಮುಖ್ಯಭೂಮಿಕೆಯ ಹೊಸ ಸಿನಿಮಾ ಘೋಷಣೆಯಾಗಿದ್ದು, ಅಭಿಮಾನಿಗಳು, ಸಿನಿಪ್ರಿಯರು ಉತ್ಸಾಹ ವ್ಯಕ್ತಪಡಿಸಿದ್ದಾರೆ.

By ETV Bharat Karnataka Team

Published : Jul 5, 2024, 6:49 AM IST

Updated : Jul 5, 2024, 7:44 AM IST

Shiva Rajkumar,  Bhairavana Kone PaaTa
ಶಿವರಾಜ್​ಕುಮಾರ್, 'ಭೈರವನ ಕೊನೆ ಪಾಠ' ಪೋಸ್ಟರ್ (ETV Bharat)

ಕನ್ನಡ ಚಿತ್ರರಂಗದ ಜನಪ್ರಿಯ ನಟ ಶಿವರಾಜ್​ಕುಮಾರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರಗಳಾದ 'ಭೈರತಿ ರಣಗಲ್' ಹಾಗೂ '45' ಶೂಟಿಂಗ್​​​​ನಲ್ಲಿ ನಿರತರಾಗಿರುವ ಹ್ಯಾಟ್ರಿಕ್ ಹೀರೋನ ಹೊಸ ಸಿನಿಮಾ ಘೋಷಣೆಯಾಗಿದೆ. ನಟನ ಜನ್ಮದಿನಕ್ಕೆ ಇನ್ನೊಂದು ವಾರ ಬಾಕಿ ಇರುವಾಗ ಮತ್ತೊಂದು ಪ್ರಾಜೆಕ್ಟ್​​ ಘೋಷಣೆಯಾಗಿರೋದು ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿದೆ.

'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ', 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಹೇಮಂತ್ ಎಂ ರಾವ್ ಕರುನಾಡ ಚಕ್ರವರ್ತಿಯ ಮುಂದಿನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌. ಹೇಮಂತ್-ಶಿವಣ್ಣನ ಕಾಂಬಿನೇಶನ್​​ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರಕ್ಕೆ 'ಭೈರವನ ಕೊನೆ ಪಾಠ' ಎಂಬ ಕುತೂಹಲಕಾರಿ ಶೀರ್ಷಿಕೆ ಇಡಲಾಗಿದೆ.

ನಿರ್ದೇಶಕ ಹೇಮಂತ್ ಎಂ ರಾವ್ ಅವರ ಸಿನಿಮಾಗಳ ಶೀರ್ಷಿಕೆಗಳು ಯಾವಾಗಲೂ ವಿಶಿಷ್ಟವಾಗಿರುತ್ತವೆ. ಈ ಬಗ್ಗೆ ಪ್ರಶ್ನಿಸಿದಾಗ, ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ. ಈ ಹಿಂದೆ ಕನ್ನಡ ಸಿನಿಮಾಗಳ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು, ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಶೀರ್ಷಿಕೆಗಳು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾದವು. 'ಭೈರವನ ಕೊನೆ ಪಾಠ' ಕೂಡಾ ಆ ಸಾಲಿಗೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಸಿನಿ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ ಉದ್ದೇಶ ನಮ್ಮದು. ಅದರಲ್ಲೂ ನಾನು ಬಹಳ ಇಷ್ಟಪಡುವ ಶಿವಣ್ಣ ಅವರ ಸಿನಿಮಾ ಶೀರ್ಷಿಕೆಗಳ ಸೌಂದರ್ಯವನ್ನು ಸದಾ ಕಾಲ ನೆನಪಿರುವಂತೆ ಮಾಡುವುದು ನನ್ನ ಬಯಕೆ. ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಎಂದು ಹೇಳಿರುವುದೇಕೆ? ಎನ್ನುವುದೇ ಸಿನಿಮಾದ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಯಶಸ್ವಿಯಾಗಿ ಹುಟ್ಟುಹಾಕುತ್ತವೆ ಎಂಬುದು ನಮ್ಮ ನಂಬಿಕೆ ಎಂದು ವಿವರಿಸಿದರು.

ಇದನ್ನೂ ಓದಿ:ದುಬೈನಲ್ಲಿ ಜು.14ರಂದು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಬಿಡುಗಡೆ - Vidyarthi Vidyarthiniyare

ವೈಶಾಖ್ ಜೆ ಗೌಡ ನಿರ್ಮಾಣದ ಚೊಚ್ಚಲ ಚಿತ್ರವಾಗಿದ್ದು, ಶೀರ್ಷಿಕೆ ಬಗ್ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಈ ಶೀರ್ಷಿಕೆಯನ್ನು ಮೊದಲ ಬಾರಿ ಕೇಳಿದಾಗ ನಾನೆಷ್ಟು ಉತ್ಸಾಹಗೊಂಡಿದ್ದೆನೋ ಅದೇ ಉತ್ಸಾಹ ಜನರಲ್ಲೂ ಕಂಡುಬರುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರವಾಗಿ ಮೂಡಿಬರಲಿದ್ದು, ಮುಂದಿನ ತಲೆಮಾರುಗಳವರೆಗೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಚೌಕಿದಾರ್​' ಮುಹೂರ್ತ: ದಿಯಾ ಹೀರೋ ಪೃಥ್ವಿ ಅಂಬಾರ್​ಗೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ ರಥಾವರ ನಿರ್ದೇಶಕ - Chowkidar

ಸಿನಿಮಾದಲ್ಲಿ ಬಳಸಲಾಗಿರುವ ಬಾಣದ ಗುರುತಿನ ಬಗ್ಗೆ ತೂರಿಬಂದ ಪ್ರಶ್ನೆಗಳಿಗೆ ಸದ್ಯದಲ್ಲೇ ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಪೋಸ್ಟರ್​​ನಲ್ಲಿ ಉತ್ತರ ಸಿಗಲಿದೆ. ವೈಶಾಖ್ ಜೆ ಗೌಡ ಅವರ ವಿಜೆಎಫ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ‌. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅಥವಾ ಅದಕ್ಕೂ ಮೊದಲು 'ಭೈರವನ ಕೊನೆ ಪಾಠ' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

Last Updated : Jul 5, 2024, 7:44 AM IST

ABOUT THE AUTHOR

...view details