ತುಮಕೂರು: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಬೆಂಕಿ ಹಚ್ಚಿ ರಸ್ತೆಯಲ್ಲಿಯೇ ಭೀಕರವಾಗಿ ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಅನ್ನಪೂರ್ಣ ಮತ್ತು ರಾಮಕೃಷ್ಣ ಇಬ್ಬರು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ಜೊತೆಗೆ, ತಲಾ 30,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿವರ: ಗೋಕುಲ - ಬಡ್ಡಿಹಳ್ಳಿ ಬಡಾವಣೆಯಲ್ಲಿ ಪತ್ನಿ ಅನ್ನಪೂರ್ಣ ಜೊತೆ ಜಿ.ನಾರಾಯಣ ಬಾಬು ವಾಸವಾಗಿದ್ದರು. 2021ರ ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ನಾರಾಯಣ ಅವರ ಮೇಲೆ ಪತ್ನಿ ಅನ್ನಪೂರ್ಣ ತನ್ನ ಪ್ರಿಯಕರನೊಂದಿಗೆ ಸೇರಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಮೈಯೆಲ್ಲಾ ಬೆಂಕಿ ಹತ್ತಿಕೊಂಡು ಉರಿ ತಾಳಲಾರದೇ ನಾರಾಯಣ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದರು. ಮನೆಯ ಮುಂದೆ ಸ್ವಲ್ಪ ದೂರದಲ್ಲಿದ್ದ ಸಿಮೆಂಟ್ ಚರಂಡಿಗೆ ಮಕಾಡೆಯಾಗಿ ಬಿದ್ದಿದ್ದರು. ಅಲ್ಲಿಯೇ ಇದ್ದ ಆರೋಪಿ ರಾಮಕೃಷ್ಣ ಅವರನ್ನು ಹಿಂಬಾಲಿಸಿಕೊಂಡು ಬಂದು ಅಲ್ಲಿಯೇ ಬಿದ್ದಿದ್ದ 2 ಕಲ್ಲುಗಳಿಂದ ನಾರಾಯಣರ ತಲೆಯ ಹಿಂಭಾಗಕ್ಕೆ ಎತ್ತಿ ಹಾಕಿದ್ದಾರೆ. ಪರಿಣಾಮ, ಜಿ.ನಾರಾಯಣ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ಅನ್ನಪೂರ್ಣ ಆರೋಪಿ ರಾಮಕೃಷ್ಣನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಅನ್ನಪೂರ್ಣ ಜೊತೆ ನಾರಾಯಣ ಆಗಾಗ್ಗೆ ಜಗಳವಾಡುತ್ತಿದ್ದರು. ಹೀಗಾಗಿ, ಆರೋಪಿಗಳು ನಾರಾಯಣನ ಕೊಲೆಗೆ ಮುಂದಾಗಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶರಾದ ಹೆಚ್.ಅನಂತ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ 30,000 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು.
ಇದನ್ನೂ ಓದಿ: 'ಅಡುಗೆ ಚೆನ್ನಾಗಿ ಮಾಡಿಲ್ಲವೆಂದು ಕಿರುಕುಳ ನೀಡುತ್ತಿದ್ದ, ನಾನು ನಿಜವಾದ ಸಂತ್ರಸ್ತೆ': ಅತುಲ್ ಪತ್ನಿ ನಿಖಿತಾ ಹೇಳಿಕೆ