ಬೆಂಗಳೂರು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರನ್ನು ನೇಮಕ ಮಾಡದ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.
ಅಲ್ಲದೆ, ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು. ಜೊತೆಗೆ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಅಧ್ಯಕ್ಷರ ಹುದ್ದೆ ಖಾಲಿಯಿದೆ. ಇದರಿಂದಾಗಿ ಆಯೋಗಕ್ಕೆ ಬರುವ ದೂರುಗಳ ವಿಚಾರಣೆ ನಡೆಸುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ತಿಳಿಸಿದರು.
''ಅಲ್ಲದೆ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 2002ರ ಕಾಯ್ದೆ ಅಡಿ ಆಯೋಗ ರಚಿಸಲಾಗಿದ್ದು, ಅದಕ್ಕೆ ಎರಡೂವರೆ ವರ್ಷಗಳಿಂದ ಅಧ್ಯಕ್ಷರ ನೇಮಕವಾಗಿಲ್ಲ. ಇಲ್ಲಿ ಲಕ್ಷಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದು, ತುಳಿತಕ್ಕೆ ಒಳಗಾದ ಸಮುದಾಯಗಳ ಜನರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ, ತುರ್ತಾಗಿ ಅಧ್ಯಕ್ಷರ ನೇಮಕ ಮಾಡಬೇಕು'' ಎಂದು ಕೋರಿದರು.
''ಜೊತೆಗೆ, ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದ ಪರಿಣಾಮ ಪರೋಕ್ಷವಾಗಿ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗಲು ಕಾರಣವಾಗಿದೆ. ಸರ್ಕಾರವು ಅಧ್ಯಕ್ಷರ ನೇಮಕ ಮಾಡದಿರುವುದು ಸಂವಿಧಾನದ ಪರಿಚ್ಛೇದ 14ರ ಅಡಿಯಲ್ಲಿ ನೀಡಿರುವ ಸಮಾನತೆಗೆ ಧಕ್ಕೆಯಾಗಲಿದೆ. ಸಂವಿಧಾನದ ಪರಿಚ್ಛೇದ 46 ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿ ಕಾಪಾಡುವುದು ಸಾಮಾಜಿಕ ಅನ್ಯಾಯ ಮತ್ತು ಶೋಷಣೆಯಿಂದ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ'' ಎಂದರು.
ಇದನ್ನೂ ಓದಿ: ಕೆಪಿಟಿಸಿಎಲ್ ಎಇ, ಜೆಇ ನೇಮಕಕ್ಕೆ ಹೊಸದಾಗಿ ಕನ್ನಡ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ
ಸಂವಿಧಾನದ ಪರಿಚ್ಛೇದ 338 ಮತ್ತು 338-ಎ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ರಚನೆ ಮಾಡುವುದಕ್ಕೆ ಅವಕಾಶವಿದೆ. ಆದರೆ, ಸರ್ಕಾರ ಕಳೆದ 2 ವರ್ಷಗಳಿಂದ ಅಧ್ಯಕ್ಷರ ನೇಮಕ ಮಾಡದೆ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದೆ. ಇದರಿಂದ ಈ ವರ್ಗಗಳ ಮೇಲೆ ಪರಿಣಾಮ ಬೀರಲಿದೆ. ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದ ಕಾರಣ ಮಾಹಿತಿ ಹಕ್ಕು ಕಾಯ್ದೆಯಡಿ ಬಾಕಿ ಉಳಿದಿರುವ ಪ್ರಕರಣಗಳ ವಿವರ ನೀಡಲು ಆಯೋಗ ನಿರಾಕರಿಸುತ್ತಿದೆ. ಹೀಗಾಗಿ, ತಕ್ಷಣ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಸೇರಿ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.