ಬೆಂಗಳೂರು: "ಟಾರ್ಗೆಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಇರಲಿ, ಯಾರೇ ಆಗಲಿ. ನಾನು ತಲೆಕೆಡಿಸಿಕೊಳ್ಳಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾನು ಕೆಲಸ ಮಾಡಲು ಬಂದಿದ್ದೇನೆ, ಕೆಲಸ ಮಾಡಿಕೊಂಡು ಹೋಗುತ್ತೇನೆ. ಕೆಲಸ ಇಲ್ಲದವರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗುವುದಿಲ್ಲ" ಎಂದರು.
ಯತ್ನಾಳ್ ಆ್ಯಂಡ್ ಟೀಂ ವಿರುದ್ಧ ಕ್ರಮದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆ ಉತ್ತರಿಸಿ, "ಯಾರು ಕ್ರಮ ಕೈಗೊಳ್ಳಬೇಕೋ ಅವರು ತೆಗೆದುಕೊಳ್ಳುತ್ತಾರೆ. ಫೆಬ್ರವರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಇದೆ. ಅಷ್ಟರಲ್ಲೇ ರಾಜ್ಯದ ಚುನಾವಣಾ ಪ್ರಕ್ರಿಯೆ ಮುಗಿಸಬೇಕು. ಪಕ್ಷದ ಇವತ್ತಿನ ಬೆಳವಣಿಗೆಗಳ ಬಗ್ಗೆ ಕಾರ್ಯಕರ್ತರಿಗೆ ನೋವು ಇದೆ. ಆ ನೋವು ಏನು ಅಂತ ಅರ್ಥ ಆಗುತ್ತದೆ. ಇದೆಲ್ಲದಕ್ಕೂ ಶೀಘ್ರದಲ್ಲೇ ಇತಿಶ್ರೀ ಹಾಡುವ ಕೆಲಸವನ್ನು ಹೈಕಮಾಂಡ್ ಮಾಡುತ್ತದೆ" ಎಂದು ಹೇಳಿದರು.
ವಿಜಯಪುರದಲ್ಲಿ ಕಾರ್ಮಿಕರ ಮೇಲೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, "ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಈ ರೀತಿ ಘಟನೆಗಳು ನಡೆಯುತ್ತಿವೆ. ವಿಜಯಪುರದಲ್ಲಿ ಯಾವ ರೀತಿ ಕಾರ್ಮಿಕರಿಗೆ ಥಳಿಸಿದ್ದಾರೆ ಅಂತ ನೋಡುತ್ತಿದ್ದೇವೆ. ರಾಜ್ಯ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ. ಈ ರೀತಿ ನಡೆದುಕೊಂಡವರನ್ನು ಕೂಡಲೇ ಬಂಧನ ಮಾಡಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ನಾನೇ ನಂಬರ್ ಒನ್ ಲೀಡರ್ : ಬಸನಗೌಡ ಪಾಟೀಲ್ ಯತ್ನಾಳ್
ಹೊನ್ನಾವರದಲ್ಲಿ ಗೋಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, "ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ, ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲು ಕೂಯ್ದಿದ್ದಾರೆ. ಇದು ಪ್ರತಿಯೊಬ್ಬರೂ ತಲೆ ತಗ್ಗಿಸುವ ಘಟನೆ. ಇಷ್ಟೊಂದು ನಡೆದರು ಕಾನೂನು ಸುವ್ಯವಸ್ಥೆ ಸರಿಯಾಗಿದೆ ಅಂತ ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಿಂದೂ ವಿರೋಧಿ ಶಕ್ತಿ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಇವರೆಲ್ಲರಿಗೆ ಕಾನೂನಿನ ಬಗ್ಗೆಯಾಗಲಿ, ಪೊಲೀಸರ ಬಗ್ಗೆಯಾಗಲಿ ಭಯನೇ ಇಲ್ಲ.
ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟೆದೆ. ಗೃಹ ಸಚಿವರು, ಸಿಎಂ ಎಚ್ಚೆತ್ತುಕೊಳ್ಳಬೇಕು" ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆಂಬ ಸಚಿವ ಎಂ. ಬಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಮುಡಾ ವಿಚಾರದಲ್ಲಿ ನಡೆದ ಘಟನೆ ಬಳಿಕ ಕಾಂಗ್ರೆಸ್ನಲ್ಲೇ ಸಿಎಂ ಆಗುವುದಕ್ಕೆ ನಡೆಯುತ್ತಿರುವ ಗುದ್ದಾಟವನ್ನು ನಾವು ನೋಡುತ್ತಿದ್ದೇವೆ. ಇದರ ನಡುವೆ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರನ್ನು ಅವರ ಪಕ್ಷಕ್ಕೆ ಸೇರಿಸಿಕೊಂಡು ಏನು ಮಾಡುತ್ತಾರೆ" ಎಂದು ಪ್ರಶ್ನಿಸಿದರು.
ನಾಳೆ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆ : "ನಾಳೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ತಮಿಳುನಾಡಿನ ಪೊನ್ನು ರಾಧಾ ಕೃಷ್ಣ, ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬರುತ್ತಿದ್ದಾರೆ. ಬಿಜೆಪಿ ಕಚೇರಿಯಲ್ಲಿ 3 ಗಂಟೆಗೆ ಚುನಾಯಿತ ಸದಸ್ಯರು, ಸಂಸದರು, ಶಾಸಕರ ಜೊತೆ ಸಭೆ ಕರೆದಿದ್ದಾರೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆಯುತ್ತಾರೆ. ಸಂಜೆ 4 ಗಂಟೆಗೆ ಸಂಘಟನಾ ಪರ್ವ, ಜಿಲ್ಲಾ ಅಧ್ಯಕ್ಷರ ಚುನಾವಣೆ ಬಗ್ಗೆ ಸಭೆ ಇದೆ. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ಆಗುತ್ತದೆ. ಚುನಾವಣೆ ಆಫೀಸರ್ ಸಭೆ ಕೂಡ ನಡೆಯುತ್ತದೆ. ನಂತರ ರಾತ್ರಿ 7 ಗಂಟೆಗೆ ಕೋರ್ ಕಮಿಟಿ ಸಭೆ ನಡೆಯುತ್ತದೆ. ನಾಳಿನ ಸಭೆಯಲ್ಲಿ ರಾಜ್ಯದ ಪರಿಸ್ಥಿತಿ ಬಗ್ಗೆ, ರಾಜ್ಯಾಧ್ಯಕ್ಷ ಬಗ್ಗೆ ಚರ್ಚೆ ನಡೆಯುತ್ತದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪಕ್ಷದ ಕೆಲವರು ಯತ್ನಾಳ್, ರಮೇಶ್ ಜಾರಕಿಹೊಳಿಯನ್ನು ಎತ್ತಿ ಕಟ್ಟುತ್ತಿದ್ದಾರೆ: ರೇಣುಕಾಚಾರ್ಯ