ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ, ಕಾಂಗ್ರೆಸ್ನ ಹಿರಿಯ ಮುಖಂಡ ಸಂದೀಪ್ ದೀಕ್ಷಿತ್ ಅವರು ದೆಹಲಿ ಸಿಎಂ ಅತಿಶಿ, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಪಕ್ಷದ ಇತರ ಮುಖಂಡರ ವಿರುದ್ಧ 10 ಕೋಟಿ ರೂಪಾಯಿಗಳ ಸಿವಿಲ್ ಮತ್ತು ಕ್ರಿಮಿನಲ್ ಮಾನಹಾನಿ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಸಂದೀಪ್ ದೀಕ್ಷಿತ್ ಬಿಜೆಪಿಯಿಂದ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಆಪ್ ಅನ್ನು ಸೋಲಿಸಲು ಬಿಜೆಪಿಯೊಂದಿಗೆ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎಂದು ಡಿಸೆಂಬರ್ 26, 2024 ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಅತಿಶಿ ಮತ್ತು ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದರು.
ಈ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿರುವ ದೀಕ್ಷಿತ್, ಆರೋಪಗಳು ಆಧಾರ ರಹಿತ ಮತ್ತು ಮಾನಹಾನಿಕರ ಎಂದು ಹೇಳಿದ್ದಾರೆ. ಈ ಆರೋಪಗಳಿಂದ ತಮ್ಮ ಪ್ರತಿಷ್ಠೆಗೆ ಉಂಟಾದ ಹಾನಿಗಾಗಿ 10 ಕೋಟಿ ರೂ.ಗಳ ಪರಿಹಾರವನ್ನು ಅವರು ಕೋರಿದ್ದಾರೆ. ದೀಕ್ಷಿತ್ ಸಲ್ಲಿಸಿದ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ನಂತರ ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಲಾಯಿತು. ಪ್ರಕರಣದಲ್ಲಿ ವಾದಿ ಸಂದೀಪ್ ದೀಕ್ಷಿತ್ ಅವರ ಪರವಾಗಿ ವಕೀಲ ಸರೀಮ್ ಜಾವೇದ್ ದೆಹಲಿ ಹೈಕೋರ್ಟ್ ಮುಂದೆ ಹಾಜರಾಗಿದ್ದರು.
ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ, ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಕಳೆದ ವಾರ ಅತಿಶಿ ಮತ್ತು ಸಂಜಯ್ ಸಿಂಗ್ ಅವರಿಗೆ ನೋಟಿಸ್ ನೀಡಿದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ಪರಾಸ್ ದಲಾಲ್ ಅವರು ನೋಟಿಸ್ ನೀಡಿದ್ದು, ಆರೋಪಗಳಿಗೆ ಪ್ರತಿಕ್ರಿಯಿಸಲು ಜನವರಿ 27, 2025 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಎಎಪಿ ನಾಯಕರಿಗೆ ಸೂಚಿಸಿದೆ.
ಸಂದೀಪ್ ದೀಕ್ಷಿತ್ ಅವರು ತಮ್ಮ ವಕೀಲ ಸರಿಮ್ ಜಾವೇದ್ ಮೂಲಕ ಸಲ್ಲಿಸಿದ ದೂರಿನಲ್ಲಿ, ಇಬ್ಬರೂ ಎಎಪಿ ನಾಯಕರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಆಧಾರರಹಿತ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಎಪಿಯನ್ನು ಸೋಲಿಸಲು ದೀಕ್ಷಿತ್ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಅತಿಶಿ ಮತ್ತು ಸಂಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ಮುಖಂಡರ ಈ ಹೇಳಿಕೆಗಳಿಗೆ ಯಾವುದೇ ಆಧಾರಗಳಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಕುತೂಹಲ ಕೆರಳಿಸಿದ್ದ ಕೇರಳ ಪ್ರಕರಣ: ಪ್ರಿಯಕರನ ಕೊಂದ ಪ್ರೇಯಸಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ - DEATH SENTENCE FOR GREESHMA