'ಬಿಗ್ ಬಾಸ್ ಸೀಸನ್ 11'ರ ಆಟ ಮುಂದುವರಿದಿದೆ. ದಿನ ಕಳೆಯುತ್ತಿದ್ದಂತೆ ಮನೆಯ ವಾತಾವರಣ ಬಹಳ ರೋಚಕತೆ ಉಂಟುಮಾಡುತ್ತಿದೆ. ಸ್ಪರ್ಧಿಗಳ ನಡುವಿನ ಮನಸ್ತಾಪಗಳು ಹೊರಬರುತ್ತಿವೆ. ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ, ಮಾತುಗಾರ್ತಿ ಚೈತ್ರಾ ಕುಂದಾಪುರ "ಇನ್ನು ನನ್ನ ಕೈಯಲ್ಲಿ ಆಗೋದಿಲ್ಲ" ಎಂದು ಹೇಳುತ್ತಾ ಗಳಗಳನೆ ಕಣ್ಣೀರಿಟ್ಟಿದ್ದಾರೆ.
'ಕೈ ಚೆಲ್ಲಿ ಕೂತ್ರಾ ಚೈತ್ರಾ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಮತ್ತೊಂದು ಪ್ರೋಮೋ ಅನಾವರಣಗೊಳಿಸಿದೆ. ಇದರಲ್ಲಿ ಚೈತ್ರಾ ಕುಂದಾಪುರ ಕಣ್ಣೀರಿಟ್ಟಿದ್ದು, ಆಪ್ತ ಸ್ನೇಹಿತರಾದ ಉಗ್ರಂ ಮಂಜು ಮತ್ತು ಗೌತಮಿ ಜಾಧವ್ ಮಾತಿಗೆ ಮಾತು ಬೆಳೆಸಿ ಕಿರಿಕ್ ಮಾಡಿಕೊಂಡಂತಿದೆ.
ಪ್ರೋಮೋದಲ್ಲಿ, ಈ ಟಾಸ್ಕ್ನಲ್ಲಿ ಗೆಲ್ಲುವ ತಂಡ ನಾಮಿನೇಷನ್ನಿಂದ ಪಾರು ಮಾಡುವ ಅಧಿಕಾರ ಪಡೆಯುತ್ತದೆ ಎಂದು ಬಿಗ್ ಬಾಸ್ ಸೂಚಿಸಿದೆ. ಚೆಂಡನ್ನು ಕೋಲಿನಿಂದ ಸಾಗಿಸುವ ಟಾಸ್ಕ್ ನೀಡಲಾಗಿದೆ. ಚೈತ್ರಾ ಕುಂದಾಪುರ ಈ ಆಟದಲ್ಲಿ ಸಫಲರಾಗಿಲ್ಲ. ಆತುರ ಬೇಡ ಚೈತ್ರಕ್ಕ ಎಂದು ಸಹಸ್ಪರ್ಧಿಗಳು ಸೂಚಿಸಿದ್ದಾರೆ. ತ್ರಿವಿಕ್ರಮ್ ಪ್ರತಿಕ್ರಿಯಿಸಿ, ಅಮ್ಮೋ ಐವತ್ ಚಾನ್ಸ್ ಆಯ್ತು ಒಂದೇ ಒಂದು ಬಾಲ್ ತಳ್ಳಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಆಟದ ನಡುವೆಯೇ ನನ್ನ ಕೈಯಲ್ಲಿ ಆಗುತ್ತಿಲ್ಲ ಎಂದು ಚೈತ್ರಾ ತಿಳಿಸಿದ್ದು, ಆಗೋಲ್ಲ ಅಂದ್ರೆ ಹೇಗೆ ಅಂತಾ ಭವ್ಯಾ ಹೇಳಿದ್ದಾರೆ.
ಮತ್ತೊಂದೆಡೆ, ಹೇಳ್ತಾ ಇರೋದ್ ಅರ್ಥ ಆಗ್ತಾ ಇದೆಯೋ ಇಲ್ವೋ? ಎಂದು ಗೌತಮಿ ಆಕ್ರೋಶ ವ್ಯಕ್ತಪಡಿಸಿದರು. ಆಟಕ್ಕೆ ಡಿಸ್ಟರ್ಬ್ ಮಾಡಿದ ಮಂಜು ಮೇಲೆ ಎಗರಿದಂತೆ ತೋರುತ್ತಿದೆ. ಸ್ಪರ್ಧಿಗಳನ್ನು ಉಳಿಸೋದಕ್ಕೆ (ಎಲಿಮಿನೇಷನ್ನಿಂದ ಬಚಾವ್ ಮಾಡಲು) ತಾನೇ ಆಡುತ್ತಾ ಇರೋದು. ಸಾಯೋದಕ್ಕಾ ಎಂದು ಮಂಜು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ನಂತರ ಡ್ರೆಸ್ಸಿಂಗ್ ರೂಮ್ನಲ್ಲಿ ಚೈತ್ರಾ ಕಣ್ಣೀರಿಟ್ಟಿದ್ದು, ಗೌತಮಿ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಸೋತ್ರೆ ಯಾವತ್ತೂ ನನ್ನನ್ನು ನಾನು ಕ್ಷಮಿಸಿಕೊಳ್ಳೋದಿಲ್ಲ ಎಂದು ಚೈತ್ರಾ ಗೋಗರೆದಿದ್ದಾರೆ. ಟಾಸ್ಕ್ ಪ್ರಾಪರ್ಟಿ ಹಿಡಿದು ತಲೆ ಚಚ್ಚಿಕೊಂಡಿರೋದನ್ನೂ ಸಹ ಈ ಪ್ರೋಮೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: 'ಚೈತ್ರಾ ಜಾಗದಲ್ಲಿ ಗಂಡ್ಮಕ್ಕಳಿದ್ದಿದ್ರೆ...'! ಹನುಮಂತು ಹೇಳಿಕೆ: ಮತ್ತೊಮ್ಮೆ ಕೆರಳಿದ ಬಿಗ್ ಬಾಸ್; ಶಿಕ್ಷೆಯೇನು?
ಟಾಸ್ಕ್ಗಳಲ್ಲಿ ಹೆಚ್ಚಾಗಿ ಚೈತ್ರಾ ಅವರಿಗೆ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ನೀಡಲಾಗುತ್ತಿತ್ತು. ಹಾಗಾಗಿ, ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕಳೆದ ವಾರ ಕಿರುಚಿ ರಂಪಾಟ ಮಾಡಿದ್ದ ಅವರು, ನನಗೆ ಆಟಗಳನ್ನು ಆಡಲು ಅವಕಾಶ ಕೊಡೋದಿಲ್ಲ. ನಂತರ ನಿಮ್ಮ ಪರ್ಫಾಮೆನ್ಸ್ ಇಲ್ಲ ಅಂತಾ ನಾಮಿನೇಟ್ ಮಾಡುತ್ತಾರೆ ಎಂದು ಕಣ್ಣೀರಧಾರೆ ಸುರಿಸಿದ್ದರು. ಆದ್ರೆ ಈ ಬಾರಿ ಟಾಸ್ಕ್ ನೀಡಿದ್ದರೂ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ನನ್ನಿಂದ ಆಗೋದಿಲ್ಲ ಅನ್ನೋ ಮಾತು ಕೂಡಾ ಕೇಳಿಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಸಂಜೆ ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್ಕುಮಾರ್: ಡಿ.24ಕ್ಕೆ ಸರ್ಜರಿ