ನವದೆಹಲಿ: ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಸಂಬಂಧ, ಜಾಗತಿಕ ಶಾಂತಿ ಮತ್ತು ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ದೂರವಾಣಿಯಲ್ಲಿ ಪರಸ್ಪರ ಮಾತುಕತೆ ನಡೆಸಿದರು.
ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಿದ್ದು ಖುಷಿ ತಂದಿದೆ-ಮೋದಿ: "ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಸಹಭಾಗಿತ್ವಕ್ಕೆ ಉಭಯ ದೇಶಗಳು ಬದ್ಧವಾಗಿವೆ. ಆತ್ಮೀಯ ಸ್ನೇಹಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಖುಷಿ ತಂದಿದೆ. ಎರಡನೇ ಬಾರಿ ಅಧ್ಯಕ್ಷರಾಗಿರುವ ಟ್ರಂಪ್ ಅವರನ್ನು ಅಭಿನಂದಿಸಿದ್ದೇನೆ" ಎಂದು ಎಕ್ಸ್ನಲ್ಲಿ ಮೋದಿ ತಿಳಿಸಿದ್ದಾರೆ.
Delighted to speak with my dear friend President @realDonaldTrump @POTUS. Congratulated him on his historic second term. We are committed to a mutually beneficial and trusted partnership. We will work together for the welfare of our people and towards global peace, prosperity,…
— Narendra Modi (@narendramodi) January 27, 2025
"ಪ್ರಧಾನಿ ಮೋದಿ ಜೊತೆಗಿನ ದೂರವಾಣಿ ಮಾತುಕತೆ ಫಲಪ್ರದವಾಗಿದೆ. ನ್ಯಾಯಸಮ್ಮತ ದ್ವಿಪಕ್ಷೀಯ ಸಂಬಂಧ ಮತ್ತು ಭಾರತ-ಅಮೆರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಟ್ರಂಪ್ ಬಯಸಿದ್ದಾರೆ. ಇಬ್ಬರೂ ನಾಯಕರು ದೇಶಗಳ ಮಧ್ಯೆ ಸಹಕಾರ ವಿಸ್ತರಿಸುವ ಕುರಿತು ಮಾತನಾಡಿದ್ದಾರೆ" ಎಂದು ಶ್ವೇತ ಭವನ ಪ್ರಕಟಣೆ ಹೊರಡಿಸಿದೆ.
"ಅಮೆರಿಕಕ್ಕೆ ಮೋದಿ ಭೇಟಿ ಕುರಿತು ಕೂಡಾ ಉಭಯ ನಾಯಕರು ಚರ್ಚಿಸಿದ್ದಾರೆ. ಇಂಡೋ-ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಲ್ಲಿ ಭದ್ರತೆ ಸೇರಿದಂತೆ ಹಲವು ಜಾಗತಿಕ ವಿಷಯಗಳ ಬಗೆಗೂ ಮಾತನಾಡಿದ್ದಾರೆ" ಎಂದು ಶ್ವೇತ ಭವನ ತಿಳಿಸಿದೆ.
'ನ್ಯಾಯಯುತ' ದ್ವಿಪಕ್ಷೀಯ ವ್ಯಾಪಾರಕ್ಕೆ ಟ್ರಂಪ್ ಒತ್ತು: "ಅಮೆರಿಕ ನಿರ್ಮಿತ ಭದ್ರತಾ ಸಲಕರಣೆಗಳ ಖರೀದಿಯನ್ನು ಭಾರತ ಹೆಚ್ಚಿಸುವ ಮತ್ತು ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧದತ್ತ ಸಾಗುವ ಮಹತ್ವವನ್ನು ಅಮೆರಿಕ ಅಧ್ಯಕ್ಷರು ಒತ್ತಿ ಹೇಳಿದ್ದಾರೆ. ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಇಂಡೋ-ಪೆಸಿಫಿಕ್ ಕ್ವಾಡ್ ಸಹಭಾಗಿತ್ವ ಮುನ್ನಡೆಸುವ ಬದ್ಧತೆಯ ಬಗ್ಗೆ ನಾಯಕರು ಸಮ್ಮತಿ ಸೂಚಿಸಿದ್ದಾರೆ. ಈ ಬಾರಿ ಕ್ವಾಡ್ ಲೀಡರ್ಸ್ ಅನ್ನು ಭಾರತ ಮೊದಲ ಬಾರಿಗೆ ಆಯೋಜಿಸುತ್ತಿದೆ" ಎಂದು ಶ್ವೇತ ಭವನ ಉಲ್ಲೇಖಿಸಿದೆ.
ಮೊದಲ ಅವಧಿಯಲ್ಲಿ ಅಧ್ಯಕ್ಷ ಟ್ರಂಪ್ ಕೊನೆಯ ವಿದೇಶ ಪ್ರವಾಸವಾಗಿ ಭಾರತಕ್ಕೆ ಬಂದಿದ್ದರು. 2019ರ ಸೆಪ್ಟೆಂಬರ್ನಲ್ಲಿ ಹೂಸ್ಟನ್ ಮತ್ತು 2020ರ ಫೆಬ್ರವರಿಯಲ್ಲಿ ಅಹಮದಾಬಾದ್ನಲ್ಲಿ ಟ್ರಂಪ್ ಮತ್ತು ಮೋದಿ ಬೃಹತ್ ರ್ಯಾಲಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. 2024ರ ನವೆಂಬರ್‌ನಲ್ಲಿ ಟ್ರಂಪ್ ಅವರ ಚುನಾವಣಾ ಗೆಲುವಿನ ನಂತರ ಅವರೊಂದಿಗೆ ಮಾತನಾಡಿದ ಅಗ್ರ ಮೂರು ವಿಶ್ವ ನಾಯಕರಲ್ಲಿ ಮೋದಿ ಕೂಡ ಒಬ್ಬರು.
ಇದನ್ನೂ ಓದಿ: ಜನ್ಮದತ್ತ ಪೌರತ್ವ ರದ್ದು ಮಾಡಿದ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ನ್ಯಾಯಾಧೀಶರಿಂದ ತಾತ್ಕಾಲಿಕ ತಡೆ
ಇದನ್ನೂ ಓದಿ: ಟ್ರಂಪ್ ಆಡಳಿತದ ವಲಸೆ ನೀತಿ: ಭಾರತದ ಮೇಲಾಗಬಹುದಾದ ಪರಿಣಾಮಗಳೇನು?