ಹೈದರಾಬಾದ್: ಸಾಧಿಸುವ ಛಲಕ್ಕೆ ಯಾವುದೇ ಸಮಸ್ಯೆಗಳು ಸವಾಲಾಗುವುದಿಲ್ಲ. ಅದೇ ರೀತಿಯ ಛಲದಿಂದ ಪ್ರಸವ ನೋವಿನ ನಡುವೆ ತುಂಬು ಗರ್ಭಿಣಿಯೊಬ್ಬರು ಪರೀಕ್ಷೆ ಬರೆದು ಗಮನ ಸೆಳೆದಿದ್ದಾರೆ. ಸರ್ಕಾರಿ ಉದ್ಯೋಗದ ಆಪೇಕ್ಷೆ ಹೊಂದಿದ್ದ ತುಂಬು ಗರ್ಭಿಣಿ ರೇವತಿ ನಾಗರಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದ ಬಾಣಲ ಗ್ರಾಮದ ಸರ್ಕಾರಿ ಶಾಲೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಡಿಸೆಂಬರ್ 15ರಂದು ಭಾನುವಾರ ನಡೆದ ಗ್ರೂಪ್-2 ಮೊದಲ ಮತ್ತು ಎರಡನೇ ಪತ್ರಿಕೆ ಪರೀಕ್ಷೆಗೆ ಹಾಜರಾಗಿದ್ದಾರೆ. ಇದಾದ ಬಳಿಕ ಡಿಸೆಂಬರ್ 16ರಂದು ಮೂರು ಮತ್ತು ನಾಲ್ಕನೇ ಪತ್ರಿಕೆ ಪರೀಕ್ಷೆಯನ್ನು ಬರೆದು ಮುಗಿಸಿದ್ದಾರೆ. ಇಂದು ಮೂರನೇ ಪತ್ರಿಕೆ ಪರೀಕ್ಷೆ ನಡೆಯುವಾಗ ಅವರಿಗೆ ಸಣ್ಣದಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಅವರು ಪರೀಕ್ಷಾ ನಿರ್ವಹಣಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆಸ್ಪತ್ರೆಗೆ ತೆರಳಲು ನಿರಾಕರಣೆ: ಅಧಿಕಾರಿಗಳು ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಜ್ಜಾಗಿದ್ದರು. ಆದರೆ, ರೇವತಿ ಮಾತ್ರ ನೋವಿನಲ್ಲೂ ತಾನು ಪರೀಕ್ಷೆ ಮುಗಿಸಿ ಬರುವುದಾಗಿ ತೀರ್ಮಾನಿಸಿ, ಆಸ್ಪತ್ರೆಗೆ ಹೊರಡಲು ನಿರಾಕರಿಸಿದ್ದಾರೆ. ರೇವತಿ ಅವರ ಡೆಲಿವರಿ ದಿನಾಂಕ ಕೂಡ ಇಂದೇ ಇರುವುದಾಗಿ ನಿಗದಿಯಾದ ಹಿನ್ನೆಲೆ ಸಿಬ್ಬಂದಿ ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಕೊಂಚ ಆತಂಕದ ವಾತಾವರಣ ಕೂಡ ನಿರ್ಮಾಣವಾಗಿತ್ತು.
ಮನವೊಲಿಸಿದರೂ ದೃಢ ನಿರ್ಧಾರ ಕೈಗೊಂಡು ಪರೀಕ್ಷೆ ಬರೆದ ಅಭ್ಯರ್ಥಿ: 3ನೇ ಪತ್ರಿಕೆ ಪರೀಕ್ಷೆ ಬರೆದ ಬಳಿಕ ಮಧ್ಯಾಹ್ನವಿದ್ದ ನಾಲ್ಕನೇ ಪತ್ರಿಕೆಯನ್ನು ಕೂಡ ಅವರು ಬರೆಯಲು ಸಜ್ಜಾಗಿದ್ದಾರೆ. ಈ ನಡುವೆ ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನ ನಡೆಸಿದರೂ, ಪರೀಕ್ಷೆ ಬರೆದು ಮುಗಿಸುವ ದೃಢ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ನಾಗರ್ಕರ್ನೂಲ್ ಜಿಲ್ಲಾಧಿಕಾರಿ ಸಂತೋಷ್ ಅವರ ಗಮನಕ್ಕೆ ಕೂಡ ಬಂದಿದೆ. ತಕ್ಷಣಕ್ಕೆ ಅವರು ಸಿಬ್ಬಂದಿಗಳಿಗೆ ಅವರಿಗೆ ವಿಶೇಷ ಸೌಲಭ್ಯ ಒದಗಿಸುವಂತೆ ಕೂಡ ಸೂಚನೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಸನ್ನದ್ಧವಾಗಿ ನಿಂತಿರುವ ತುರ್ತು ವಾಹನ: ಪರೀಕ್ಷಾ ಕೇಂದ್ರದ ಹೊರಗೆ 108 ತುರ್ತು ವಾಹನ ನಿಲ್ಲಿಸಲಾಗಿದ್ದು, ರೇವತಿ ಪರೀಕ್ಷೆ ಬರೆಯುತ್ತಿರುವ ಕೇಂದ್ರ ಸುತ್ತ ವೈದ್ಯಕೀಯ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಪರೀಕ್ಷಾ ಕೇಂದ್ರದ ಎಲ್ಲರಲ್ಲೂ ಕೂಡ ಆತಂಕ ಎದುರಾಗಿದೆ. ಆದರೆ, ರೇವತಿ ಮಾತ್ರ ಯಶಸ್ವಿಯಾಗಿ ಪರೀಕ್ಷೆ ಬರೆಯುವ ಆತ್ಮವಿಶ್ವಾಸ ಹೊಂದಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದ ಸಿಬ್ಬಂದಿ ಮತ್ತು ಜಿಲ್ಲಾಡಳಿತ ನಡೆಸಿರುವ ಸಿದ್ಧತೆಗಳು ಕುಟುಂಬಸ್ಥರಲ್ಲಿ ನೆಮ್ಮದಿ ಮೂಡಿಸಿದೆ.
ಇದನ್ನೂ ಓದಿ: ಆನೆ ಉರುಳಿಸಿದ ತಾಳೆಮರದ ಗರಿ ಬಡಿದು ಬೈಕ್ನಲ್ಲಿ ಸಾಗುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು