ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್ 'ಭೈರತಿ ರಣಗಲ್'. ತನ್ನ ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ ಇದು. ಕರುನಾಡ ಚಕ್ರವರ್ತಿ 'ಭೈರತಿ ರಣಗಲ್' ಆಗಿ ಬೆಳ್ಳಿ ತೆರೆ ಮೇಲೆ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಅವರ ಅಭಿಮಾನಿ ಬಳಗದಲ್ಲಿದೆ.
ಮಫ್ತಿ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಕುತೂಹಲಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಟೀಸರ್ನಿಂದಲೇ ಸಖತ್ ಕ್ರೇಜ್ ಕ್ರಿಯೇಟ್ ಆಗಿರುವ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗಷ್ಟೇ ಆನಂದ್ ಆಡಿಯೋ ಮೂಲಕ ಅನಾವರಣಗೊಂಡಿದ್ದು, ಸಿನಿಪ್ರಿಯರು ಮನ ಸೋತಿದ್ದಾರೆ.
ಕಿನ್ನಾಳ್ ರಾಜ್ ಅವರು ಬರೆದಿರುವ 'ಇತಿಹಾಸವೇ ನಿಬ್ಬೆರಿಗಿಸುತ ಎತ್ತಿ ಹಿಡಿದಿರೋ ಮೈಲಿಗಲ್ಲು' ಎಂಬ ಭೈರತಿ ರಣಗಲ್ ಸಿನಿಮಾದ ಶೀರ್ಷಿಕೆ ಗೀತೆಯೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ನೀಡಿದ್ದು, ಸಂತೋಷ್ ವೆಂಕಿ ಹಾಡಿದ್ದಾರೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಆಗುತ್ತಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಬಹುನಿರೀಕ್ಷಿತ ಚಿತ್ರದಲ್ಲಿ ಶಿವರಾಜಕುಮಾರ್ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಆಕಾಶ್ ಹಿರೇಮಠ ಸಂಕಲನ ನಿರ್ವಹಿಸಿದ್ರೆ, ಗುಣ ಅವರ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ 'ಭೈರತಿ ರಣಗಲ್' ಚಿತ್ರಕ್ಕಿದೆ.