ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಚಿತ್ರಸಂತೆಯಲ್ಲಿ ದೃಶ್ಯಕಲಾ ವೈಭವ ಮೇಳೈಸಿದೆ. ಈ ಬಾರಿಯ ಚಿತ್ರಸಂತೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸಮರ್ಪಿಸಿರುವುದರಿಂದ ಮಹಿಳಾ ಪ್ರಧಾನ ಕಲಾಕೃತಿಗಳು ಹೆಚ್ಚು ಗಮನ ಸೆಳೆಯುತ್ತಿದ್ದು, ಕಲಾಸಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.
22ನೇ ಚಿತ್ರಸಂತೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ರಾತ್ರಿ 9ರವರೆಗೂ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶವಿದೆ. ಕಲಾಸಕ್ತರು ಪಾಲ್ಗೊಂಡು ನೆಚ್ಚಿನ ಕಲಾಕೃತಿ ಖರೀದಿಸಬಹುದಾಗಿದೆ.
ಕಲಾಸಕ್ತರನ್ನ ಸೆಳೆಯುತ್ತಿವೆ ವಿವಿಧ ಕಲಾಕೃತಿಗಳು : ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣುಮಕ್ಕಳಿಗೆ ಸಮರ್ಪಿಸಲಾಗಿದೆ. ಸ್ತ್ರೀ ಸಬಲೀಕರಣ, ಏಳಿಗೆಗಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ, ಡಾ. ಬಿ. ಆರ್ ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ ಮುಂತಾದವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 1,500 ಕಲಾವಿದರ ಕಲಾಕೃತಿಗಳು ಚಿತ್ರಸಂತೆಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಸುಮಾರು 6 ಲಕ್ಷ ಜನ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ಆಶಯ ವ್ಯಕ್ತಪಡಿಸಿದರು.
ಕಲಾಕೃತಿ ಖರೀದಿಗೆ ಸಿಎಂ ಕರೆ; ಚಿತ್ರ ಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಂಡಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ. ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರಸಂತೆ ಒದಗಿಸುತ್ತಿದೆ. ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಸಂತೆ ಉದ್ಘಾಟಿಸಿದ ಬಳಿಕ ಮಾತನಾಡಿದ್ದರು.
ಮಾರ್ಗ ಬದಲಾವಣೆ : ಚಿತ್ರಸಂತೆ ಹಿನ್ನೆಲೆಯಲ್ಲಿ ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ (ಈಶಾನ್ಯ ದಿಕ್ಕಿನಿಂದ ನೈಋತ್ಯ ದಿಕ್ಕಿನ ಕಡೆಗೆ) ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ಸಂಚಾರ ಪೊಲೀಸರು ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಈ ಬಾರಿಯ ಚಿತ್ರಸಂತೆಯ ನೋಂದಣಿ, ಅರ್ಜಿ ಸಲ್ಲಿಕೆ, ನೋಂದಣಿ ಶುಲ್ಕ ಪಾವತಿ, ಚಿತ್ರಸಂತೆಯಲ್ಲಿ ಭಾಗವಹಿಸಲು ಕಲಾವಿದರ ಆಯ್ಕೆ ಹಾಗೂ ಆಯ್ಕೆಯಾದ ಕಲಾವಿದರಿಗೆ ಮಳಿಗೆ ವಿತರಣೆ ಮಾಡುವ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರಸಂತೆ ಉದ್ಘಾಟಿಸಿದ ಸಿಎಂ: ಕಲಾಕೃತಿ ಕೊಂಡು ಕಲಾವಿದರನ್ನು ಬೆಂಬಲಿಸುವಂತೆ ಸಿದ್ದರಾಮಯ್ಯ ಕರೆ