ಧಾರವಾಡ : ಅಂತ್ಯಸಂಸ್ಕಾರಕ್ಕೆ ಹೋಗುವಾಗ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಕ್ರೂಸರ್ನಲ್ಲಿದ್ದ 14 ಜನರು ಗಾಯಗೊಂಡಿದ್ದಾರೆ. ಈ ಪೈಕಿ ನಾಲ್ವರು ಗಂಭೀರವಾಗಿ ಗಾಯವಾಗಿರುವ ಘಟನೆ ಜಿಲ್ಲೆಯ ಕಲಕೇರಿ ಗ್ರಾಮದ ಸಮೀಪ ನಡೆದಿದೆ.
ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ ಕ್ಯಾರಕೊಪ್ಪ-ಕಲಕೇರಿ ಮಧ್ಯೆ ಅಪಘಾತ ನಡೆದಿದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ನಾಲ್ವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ 10 ಜನ ಗಾಯಾಳುಗಳನ್ನ ಹುಬ್ಬಳ್ಳಿ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.
ಕಲಕೇರಿಯಲ್ಲಿ ಗದಿಗೆವ್ವ ಹುಲಮನಿ ಎಂಬುವರ ಅಂತ್ಯಸಂಸ್ಕಾರಕ್ಕೆ ಹೊರಟಿದ್ದಾಗ ಕಲಕೇರಿ ಗ್ರಾಮದ ಸಮೀಪ ಈ ಅವಘಡ ಜರುಗಿದೆ. ಗಾಯಾಳುಗಳೆಲ್ಲ ಧಾರವಾಡ ಹೊಸಯಲ್ಲಾಪುರ ಕೋಳಿಕೇರಿ ನಿವಾಸಿಗಳು ಎಂದು ತಿಳಿದುಬಂದಿದೆ.
ಈ ಬಗ್ಗೆ ಯಲ್ಲಪ್ಪ ಎಂಬುವವರು ಮಾತನಾಡಿ, ಕಲಕೇರಿಗೆ ಮಣ್ಣು ಕೊಡಲು ಹೋಗುವಾಗ ಈ ಘಟನೆ ನಡೆದಿದೆ. ಆಕಸ್ಮಿಕವಾಗಿ ಈ ಘಟನೆ ಜರುಗಿದೆ. 16 ಜನರಿಗೆ ಗಾಯವಾಗಿದೆ. ಇಬ್ಬರು ಗಂಭೀರವಾಗಿದ್ದಾರೆ. ಮುಂದೆ ವಾಹನ ಬಂದಾಗ ಸೈಡ್ ತೆಗೆದುಕೊಂಡ ಎಂದು ಪೇಷಂಟ್ ಹೇಳಿದ್ದಾರೆ. ಬ್ಯಾಲೆನ್ಸ್ ತಪ್ಪಿದೆ ಎಂದು ಹೇಳಿದ್ರು. ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ವಾಹನದಲ್ಲಿದ್ದ ಎಲ್ಲರಿಗೂ ಗಾಯವಾಗಿದೆ. ಕೆಲವರಿಗೆ ತಲೆಗೆ ಪೆಟ್ಟಾಗಿದೆ ಎಂದಿದ್ದಾರೆ.