ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಭಾರತದಲ್ಲಿಯೇ ಅತಿದೊಡ್ಡ ಸ್ಮೃತಿ ಗ್ರಾಮ ದೊಡ್ಡಬಳ್ಳಾಪುರದ ತಿರುಮಗೊಂಡನಹಳ್ಳಿಯಲ್ಲಿ ತಲೆ ಎತ್ತಲಿದ್ದು, ಸಚಿವ ಕೆ. ಹೆಚ್ ಮುನಿಯಪ್ಪ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ 2026ರ ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಮಾಡಲಿದೆ.
ಸ್ಮೃತಿ ಗ್ರಾಮಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ಕೆ. ಹೆಚ್ ಮುನಿಯಪ್ಪ, ಗ್ರಾಮಾಂತರ ಪ್ರದೇಶದಲ್ಲಿ ಮರೆವು ಸಂಬಂಧಿತ ಕಾಯಿಲೆಗೆ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ನ ಸಾಮಾಜಿಕ ಕಳಕಳಿಯ ಬಗ್ಗೆ ಅಭಿನಂದನೆ ಸಲ್ಲಿಸುವೆ. ಇವತ್ತು ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಇದೆ. ಅಂತಹ ವೃದ್ಧರ ರಕ್ಷಣೆ ಮಾಡುವ ಮತ್ತು ಆರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ನೈಟಿಂಗೇಲ್ಸ್ ಸಂಸ್ಥೆ ಮಾಡುತ್ತಿದೆ. ಸರ್ಕಾರದಿಂದ ಅವರಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ನೈಟಿಂಗೇಲ್ಸ್ ಮೆಡಿಕಲ್ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಧಾ ಎಸ್ ಮೂರ್ತಿ ಮಾತನಾಡಿ, ಸ್ಮರಣಾ ಶಕ್ತಿಯ ನಷ್ಟ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುವ ಮೆದುಳಿನ ಕಾಯಿಲೆ ಡಿಮೆನ್ಶಿಯಾ, ಭಾರತದಲ್ಲಿ ಸದ್ಯ 90 ಲಕ್ಷ ಹಿರಿಯರು ಡಿಮೆನ್ಶಿಯಾ ರೋಗದಿಂದ ಬಳಲುತ್ತಿದ್ದಾರೆ. 2036ರ ವೇಳೆಗೆ ಈ ಸಂಖ್ಯೆ 1.7 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆ ಮತ್ತು ಆರೈಕೆಗಾಗಿ ಈ ಸ್ಮೃತಿ ಗ್ರಾಮ ನಿರ್ಮಾಣ ಮಾಡಲಾಗುತ್ತಿದೆ. 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಡಿಮೆನ್ಶಿಯಾ ಆರೈಕೆ ಕೇಂದ್ರವಾಗಿದ್ದು, ಬಡವರಿಗಾಗಿ 100 ಹಾಸಿಗೆಗಳನ್ನ ಮೀಸಲಿಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ರಾಜಣ್ಣ, ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಆರ್. ವಿ ಮಹೇಶ್ ಕುಮಾರ್, ಮುಖಂಡರಾದ ರಾಜ್ ಗೋಪಾಲ್, ರವಿಸಿದ್ದಪ್ಪ, ರಾಮಕೃಷ್ಣಪ್ಪ ಸೇರಿದಂತೆ ಸ್ಥಳೀಯ ಮುಖಂಡರಿದ್ದರು.
ಇದನ್ನೂ ಓದಿ : ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ - MINISTER KH MUNIYAPPA