ಬೆಳಗಾವಿ: ಸಾರಾಯಿ ಕುಡಿದು ಗಲಾಟೆ ಮಾಡುತ್ತಿದ್ದ ಗಂಡನ ಕತ್ತು ಹಿಸುಕಿ ಪತ್ನಿಯೇ ಕೊಲೆಗೈದಿರುವ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಮೂಲತಃ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಅಮಿತ್ ರಾಯಬಾಗ (38) ಕೊಲೆಯಾದ ವ್ಯಕ್ತಿ. ಪತ್ನಿ ಆಶಾ ರಾಯಬಾಗ (30) ಕೊಲೆ ಆರೋಪಿ.
"ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿ ಅಂಗಡಿಯಲ್ಲಿ ಅಮಿತ್ ಕೆಲಸ ಮಾಡುತ್ತಿದ್ದ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪತ್ನಿ ಆಶಾ ಕೆಲಸ ಮಾಡುತ್ತಿದ್ದರು. ಗಂಡ ಕುಡಿದು ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ. ನಿರಂತರ ಕಿರುಕುಳಕ್ಕೆ ಬೇಸತ್ತು ವೇಲ್‌ನಿಂದ ಕೊರಳಿಗೆ ಸುತ್ತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಷನ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.
ಸಂಬಂಧಿಕ ರಮೇಶ್ ಮಾತನಾಡಿ, "ಇತ್ತೀಚೆಗೆ ಅಮಿತ್ ಹೆಚ್ಚು ಸಾರಾಯಿ ಕುಡಿಯಲು ಶುರು ಮಾಡಿದ್ದ. ಮನೆಗೆ ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಈ ಸಂಬಂಧ ನಾವು ಅವರಿಗೆ ಬುದ್ಧಿವಾದ ಹೇಳಿದ್ದೆವು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಇವರಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ" ಎಂದು ತಿಳಿಸಿದರು.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿ, "ಪದೇ ಪದೆ ದಂಪತಿ ನಡುವೆ ಜಗಳ ಆಗುತ್ತಿತ್ತು. ಗಂಡನ ಕಿರುಕುಳದ ಬಗ್ಗೆ ಈ ಹಿಂದೆ ಹೆಂಡತಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಗ 107 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೆ ನಿನ್ನೆ ಇಬ್ಬರ ಮಧ್ಯ ಜಗಳವಾಗಿದ್ದು, ಗಲಾಟೆಯಲ್ಲಿ ಹೆಂಡತಿಯು ಗಂಡನನ್ನು ಕೊಲೆ ಮಾಡಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆ ನಡೆದ ಬಳಿಕ ಮನೆ ವಸ್ತುಗಳ ಸಮೇತ ಆರೋಪಿ ಪರಾರಿಯಾಗಲು ಯತ್ನಿಸಿದ್ದ. ಸದ್ಯ ಕೊಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಪೂಜೆಗೆಂದು ಕರೆದೊಯ್ದು ಗಂಡನ ಕೊಲೆ; 24 ಗಂಟೆಯಲ್ಲೇ ಪತ್ನಿ, ಪ್ರಿಯಕರನ ಬಂಧನ