ದಾವಣಗೆರೆ: "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಇನ್ನುಳಿದ ಮೂರುವರೆ ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ" ಎಂದು ಸಚಿವ ಭೈರತಿ ಸುರೇಶ್ ಹೇಳಿದರು.
ನಗರದಲ್ಲಿ ಇಂದು ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇನ್ನೂ ಮೂರುವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇರಲಿದೆ. ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಅವರ ಕೈಗಳನ್ನು ನಾವು ಬಲಪಡಿಸಬೇಕಾಗಿದೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಹಿನ್ನೆಲೆ ನಡೆದ ಸಿದ್ದರಾಮಯ್ಯ ಮಹೋತ್ಸವದ ವೇಳೆ 16 ಲಕ್ಷ ಜನ ಸೇರಿ ನಮ್ಮ ನಾಯಕನಿಗೆ ನೀಡಿದ ಗೌರವಕ್ಕೆ ನಾನು ಚಿರಋಣಿ ಎಂದರು.
"ಈ ರಾಜ್ಯದಲ್ಲಿರುವ ಪ್ರತಿಯೊಬ್ಬರು ಒಂದೇ ಎಂಬುದು ಸರ್ಕಾರದ ಉದ್ದೇಶ. ಸಿದ್ದರಾಮಯ್ಯನವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ವ್ಯಕ್ತಿ, ಸಮಾಜ, ಧರ್ಮದವರು ಸರ್ಕಾರದ ದೃಷ್ಟಿಯಲ್ಲಿ ಒಂದೇ. ಹಲವು ಶಾಲೆ, ಹಾಸ್ಟೆಲ್ಗಳನ್ನು ನಿರ್ಮಾಣ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ" ಎಂದು ತಿಳಿಸಿದರು.
5 ವರ್ಷ ಪೂರೈಸುವ ತನಕ ಸಿದ್ದರಾಮಯ್ಯನವರ ಜೊತೆಗೆ ನಾವಿರುತ್ತೇವೆ: ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, "ಹಿಂದುಳಿದ, ದಲಿತ ಮತ್ತು ಶೋಷಿತ ಸಮುದಾಯಗಳ ಮಠಾಧೀಶರ ಒಕ್ಕೂಟ ಸದಾ ಸಿಎಂ ಸಿದ್ದರಾಮಯ್ಯನವರ ಪರ ಇರಲಿದೆ. ಸಿದ್ದರಾಮಯ್ಯನವರು ಸಿಎಂ ಆಗಿ ಐದು ವರ್ಷ ಪೂರೈಸುವ ತನಕ ನಾವು ಅವರ ಜೊತೆಗಿರುತ್ತೇವೆ" ಎಂದು ಅಭಯ ನೀಡಿದರು.
"ಯಾರು ನಮ್ಮ ಪರವಾಗಿರುತ್ತಾರೋ ನಾವು ಅವರ ಪರವಾಗಿರುತ್ತೇವೆ ಎನ್ನುವುದಕ್ಕೆ ಕರ್ನಾಟಕದ ಜನತೆ ಸಾಕ್ಷಿ. ಹಿಂದುಳಿದ, ದಲಿತ, ಶೋಷಿತ ಸಮುದಾಯಗಳ ಪರ ಸಿಎಂ ಸಿದ್ದರಾಮಯ್ಯ ಇದ್ದರೆ, ಈ ಎಲ್ಲಾ ಸಮುದಾಯಗಳು ಅವರ ಪರ ಇರಲಿವೆ. ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ. ಇಡೀ ಭಾರತ ಕರ್ನಾಟಕದ ಕಡೆ ಮತ್ತು ಸಿದ್ದರಾಮಯ್ಯನವರ ಕಡೆ ನೋಡುತ್ತಿದೆ" ಎಂದು ಹೇಳಿದರು.
ಇದನ್ನೂ ಓದಿ: ಕೆಲವರು ದೇಶದ ನೆಮ್ಮದಿಗೆ ಭಂಗ ತರಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ