ಬೆಂಗಳೂರು: ಮಾರಕಾಸ್ತ್ರಗಳಿಂದ ರೌಡಿಶೀಟರ್‌ವೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಡರಾತ್ರಿ ಅಶೋಕ ನಗರ ಠಾಣೆ ವ್ಯಾಪ್ತಿಯ ಫುಟ್‌ಬಾಲ್ ಸ್ಟೇಡಿಯಂ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಹೈದರ್ ಅಲಿ(38) ಕೊಲೆಯಾದವ.
ಬಾರ್ ಆ್ಯಂಡ್ ರೆಸ್ಟೋರೆಂಟ್‌ನಿಂದ ಹೊರಬಂದ ಹೈದರ್ ಅಲಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿದ 2-3 ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಹೈದರ್ ಅಲಿ ಜೊತೆಗಿದ್ದ ಸ್ನೇಹಿತನ ಮೇಲೂ ಹಲ್ಲೆಯಾಗಿದ್ದು, ಗಾಯಗೊಂಡಿದ್ದಾನೆ.
2014ರಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹೈದರ್ ಅಲಿ, ಅಶೋಕ ನಗರ ಠಾಣೆಯ ರೌಡಿಶೀಟರ್ ಆಗಿದ್ದ. ಈತನ ವಿರುದ್ಧ 11 ಪ್ರಕರಣಗಳಿವೆ. 2022ರ ನಂತರ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಸಹೋದರ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ತಡರಾತ್ರಿ ಸ್ನೇಹಿತನೊಂದಿಗೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಿಂದ ಹೊರಬಂದಿದ್ದ ಹೈದರ್ ಅಲಿ, ಆನೆಪಾಳ್ಯದಲ್ಲಿರುವ ತನ್ನ ಮನೆಯತ್ತ ಕಾರಿನಲ್ಲಿ ಹೊರಟಿದ್ದ. ಅದೇ ಸಂದರ್ಭದಲ್ಲಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಅಲಿ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿದೆ. ತಕ್ಷಣ ಸ್ಥಳೀಯರ ನೆರವಿನಿಂದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದ್ದಾನೆ. ವಿಚಾರ ತಿಳಿದು ಆಸ್ಪತ್ರೆ ಬಳಿ ಜಮಾಯಿಸಿದ್ದ ಬೆಂಬಲಿಗರು ಆಸ್ಪತ್ರೆಯ ಗೇಟ್ ತಳ್ಳಿ ಆಕ್ರೋಶ ಹೊರಹಾಕಿದ ಪ್ರಸಂಗವೂ ತಡರಾತ್ರಿ ನಡೆಯಿತು.
ತಡರಾತ್ರಿ 1:30ರ ಸುಮಾರಿಗೆ ಘಟನೆ ನಡೆದಿದೆ. ಮೃತನ ಸ್ನೇಹಿತನಿಂದ ದೂರು ಪಡೆದು ಅಶೋಕ ನಗರ ಠಾಣೆಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್.ಟಿ. ತಿಳಿಸಿದರು.
ಇದನ್ನೂ ಓದಿ: ಪ್ರಿಯಕರನ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಸೇರಿ ಮೂವರು ಸೆರೆ
ಇದನ್ನೂ ಓದಿ: ಪ್ರಿಯಕರನ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಸೇರಿ ಮೂವರು ಸೆರೆ