ದುಬೈ: "2015ರ ನಂತರ ನಾನು ದಿನಕ್ಕೆ ಒಂದೇ ಊಟ ಮಾಡುತ್ತಿದ್ದೇನೆ. ಬೆಳಗಿನ ಉಪಹಾರ, ಮಧ್ಯಾಹದ ಊಟ ಮಾಡುವುದಿಲ್ಲ. ರಾತ್ರಿ ಮಾತ್ರ ಊಟ ಮಾಡುತ್ತೇನೆ. ಇದನ್ನು ಪಾಲಿಸುವುದು ಕಷ್ಟವೇ. ಆದರೆ ಒಮ್ಮೆ ನೀವಿದಕ್ಕೆ ಒಗ್ಗಿಕೊಂಡರೆ ಆಮೇಲೆ ಇದೆಲ್ಲಾ ಸಲೀಸು" ಎಂದು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಹೇಳಿದರು.
ತಾವು 34ರ ಪ್ರಾಯದಲ್ಲೂ ಫಿಟ್ ಆಗಿರುವುದು ಹೇಗೆ ಎಂಬುದನ್ನು ಅವರು ವಿವರಿಸಿದರು. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಅವರೊಂದಿಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂಭಾಷಣೆಯಲ್ಲಿ ಶಮಿ ಮಾತನಾಡಿದ್ದಾರೆ.
"ನಾನು ಪುನಶ್ಚೇತನ ಶಿಬಿರದ ಸಂದರ್ಭದಲ್ಲಿ 9 ಕೆ.ಜಿ ದೇಹತೂಕ ಕಳೆದುಕೊಂಡೆ. ನಿಮಗೆ ನೀವೇ ಸವಾಲು ಹಾಕಿಕೊಳ್ಳುವುದು ಇದೆಯಲ್ಲಾ? ಅದು ಬಹಳ ಕಷ್ಟದ ಸಂಗತಿ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ(ಎನ್‌ಸಿಎ) ಬಹಳ ಸವಾಲಿನ ಹಂತವನ್ನು ಕಳೆದೆ. ನನ್ನ ದೇಹ ತೂಕ 90 ಕೆ.ಜಿ ಇತ್ತು. ನನಗೆ ಯಾವುದೇ ಸಿಹಿ ತಿನಿಸುಗಳನ್ನು ತಿನ್ನಲೇಬೇಕೆನ್ನುವ ಹಾತೊರೆಯುವಿಕೆ ಇಲ್ಲ. ಇದು ನನ್ನ ಅತ್ಯುತ್ತಮ ಗುಣವೆನ್ನಬಹುದು. ಹಾಗಾಗಿ ನಾನು ಸುಲಭವಾಗಿ ಅವುಗಳಿಂದ ದೂರ ಇರಬಲ್ಲೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿ ಯಾವುದನ್ನು ತಿನ್ನಬಾರದೋ ಅಂಥ ಅನೇಕ ವಸ್ತುಗಳಿಂದ ನಾನು ದೂರವೇ ಇರುತ್ತೇನೆ" ಎಂದು ಶಮಿ ತಿಳಿಸಿದರು. ಇದೇ ವೇಳೆ, ಬಿರಿಯಾನಿ ವಿಚಾರಕ್ಕೆ, "ಅದು ಕೆಲವೊಮ್ಮೆ ಓಕೆ" ಎಂದು ನಸುನಕ್ಕರು.
ಮೊಹಮ್ಮದ್ ಶಮಿ ಹಿಮ್ಮಡಿ ನೋವಿನಿಂದಾಗಿ 14 ತಿಂಗಳ ಕಾಲ ಕ್ರಿಕೆಟ್ ಪಂದ್ಯಗಳಿಂದ ದೂರವಿದ್ದರು. 2023ರ ಏಕದಿನ ವಿಶ್ವಕಪ್ ಸಂದರ್ಭ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿದ್ದರು. ಈ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಇದೇ ಹೊತ್ತಿನಲ್ಲಿ ಎಡ ಮೊಣಕಾಲು ಉಬ್ಬಿಕೊಂಡಿತು. ಇದರಿಂದಾಗಿ ತಂಡಕ್ಕೆ ಮರಳುವುದು ಮತ್ತಷ್ಟು ವಿಳಂಬವಾಯಿತು. ಹೀಗಾಗಿ 1 ವರ್ಷಕ್ಕೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶಮಿ ದೂರವುಳಿದರು. ಈ ಆರೋಗ್ಯ ಸಮಸ್ಯೆಗಳಿಂದ ಹೊರಬರುತ್ತಿರುವ ಸಂದರ್ಭದಲ್ಲಿ ದೇಹದ ಭಾರ ಹೆಚ್ಚಾಗತೊಡಗಿತು. ಹೀಗಾಗಿ ಮರಳಿ ಹಳೆಯ ದೇಹ ರಚನೆ ಪಡೆಯಲು 9 ಕೆ.ಜಿ ತೂಕ ಇಳಿಸಲೇಬೇಕಿತ್ತು.
ಇಂದು ಭಾರತ-ಪಾಕಿಸ್ತಾನ ಪಂದ್ಯ: ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ-ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ಪಂದ್ಯದಲ್ಲಿ ಪ್ರಮುಖ ವೇಗಿಯಾಗಿ ಶಮಿ, ಮಹತ್ವದ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ.
3 ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶಮಿ 55 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ, ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್ ಸಾಧನೆ ಮಾಡಿದ ಭಾರತ 8ನೇ ವೇಗಿಯೂ ಹೌದು.
ಇದನ್ನೂ ಓದಿ: ಪಾಕ್ ವಿರುದ್ಧ 8 ವರ್ಷದ ಸೇಡು ತೀರಿಸಿಕೊಳ್ಳಲು ಭಾರತ ಮಾಸ್ಟರ್ ಪ್ಲಾನ್!
ಇದನ್ನೂ ಓದಿ: ಮುಂಬೈ ಎದುರು ಮಂಡಿಯೂರಿದ ಆರ್ಸಿಬಿ: ತವರಲ್ಲೇ ಮಹಿಳಾ ಮಣಿಗಳಿಗೆ ಮೊದಲ ಸೋಲು