ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ರಾಜಕೀಯ ಅಖಾಡದಲ್ಲಿ ಅಭ್ಯರ್ಥಿಗಳ ವಾಗ್ಝರಿ ಬಿರುಸಾಗಿದೆ. ಒಬ್ಬರ ಮೇಲೊಬ್ಬರು ಟೀಕೆ ಟಿಪ್ಪಣಿ ನಡೆಸುತ್ತಿದ್ದಾರೆ. ಇದು ಕೆಲವೊಂದು ವಿವಾದಗಳನ್ನೂ ಸೃಷ್ಟಿಸಿದೆ. ಸಂಸದೆ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ಅಭ್ಯರ್ಥಿ ನೀಡಿದ ಹೇಳಿಕೆಯು ಆಕ್ಷೇಪಕ್ಕೆ ಕಾರಣವಾಗಿದೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ರಮೇಶ್ ಬಿಧುರಿ ಅವರು, ಪ್ರಿಯಾಂಕಾ ವಾದ್ರಾ ಅವರ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ. ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ಟೀಕಿಸಿರುವ ಕಾಂಗ್ರೆಸ್, ಭಾರತೀಯ ಜನತಾ ಪಕ್ಷವು ಮಹಿಳಾ ವಿರೋಧಿಯಾಗಿದೆ ಎಂದು ಕಿಡಿಕಾರಿದೆ.
ಬಿಜೆಪಿ ಅಭ್ಯರ್ಥಿ ಹೇಳಿದ್ದೇನು? ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿರುವ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು, ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ರಸ್ತೆ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ತಾವು ಕಲ್ಕಾಜಿಯಲ್ಲಿ ಪ್ರಿಯಾಂಕಾ ವಾದ್ರಾ ಅವರ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಹಿಂದೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ಕೆನ್ನೆಯಂಥ ರಸ್ತೆ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದರು. ಅವರಿಂದ ಅದು ಸಾಧ್ಯವಾಗಲಿಲ್ಲ. ಆದರೆ, ನಾನು ಪ್ರಿಯಾಂಕಾ ಗಾಂಧಿ ಕೆನ್ನೆಯಂಥಹ ರಸ್ತೆಗಳನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೇಳಿಕೆಗೆ ಕಾಂಗ್ರೆಸ್ ಕಿಡಿ : ಬಿಜೆಪಿ ಅಭ್ಯರ್ಥಿಯ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ಎಕ್ಸ್ ಖಾತೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕೇಸರಿ ಪಕ್ಷವು ಮಹಿಳೆಯರ ವಿರೋಧಿಯಾಗಿದೆ. ಹೆಣ್ಣು ಕುಲಕ್ಕೆ ಅವಮಾನಿಸುವ ರೀತಿಯಲ್ಲಿ ಆ ಪಕ್ಷದ ನಾಯಕರು ನಡೆದುಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಏನು ಲಾಭ" ಎಂದು ಪ್ರಶ್ನಿಸಿದ್ದಾರೆ.
ಬಿಧುರಿ ಅವರ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಈ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಲಾಂಬಾ ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬಿಧುರಿ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಾದಿಸಿದ ಬಿಜೆಪಿ ಅಭ್ಯರ್ಥಿ : ತಮ್ಮ ಹೇಳಿಕೆ ವಿವಾದಕ್ಕೀಡಾಗಿ ಆಕ್ರೋಶ ವ್ಯಕ್ತವಾದ ಬಳಿಕ, ಈ ಬಗ್ಗೆ ಬಿಧುರಿ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತಿನಿಂದ ಯಾರಿಗಾದರೂ ನೋವು ತಂದಿದ್ದರೆ ವಿಷಾದಿಸುವೆ. ಹೇಮಾ ಮಾಲಿನಿ ಬಗ್ಗೆ ಲಾಲು ಪ್ರಸಾದ್ ಯಾದವ್ ಹೇಳಿಕೆ ನೀಡಿದಾಗ ಕಾಂಗ್ರೆಸ್ ಮೌನ ವಹಿಸಿತ್ತು. ಈಗ ಪ್ರಿಯಾಂಕಾ ಬಗೆಗಿನ ಹೇಳಿಕೆಯನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಇದೇ ವೇಳೆ ಹೇಳಿದ್ದಾರೆ.
Delhi: Reacting to his 'cheeks' remarks on Congress MP Priyanka Gandhi, BJP candidate Ramesh Bidhuri says, " i am saddened by the fact that the opposition is raising questions about something that is inherently present in their own character. lalu yadav ji had made a similar… pic.twitter.com/aqS7uXeagR
— IANS (@ians_india) January 5, 2025
ಇದನ್ನೂ ಓದಿ: ಮಥುರಾ ಇಸ್ಕಾನ್ ಟೆಂಪಲ್ನ ಲಕ್ಷಾಂತರ ಹಣ, ರಶೀದಿ ಪುಸ್ತಕದೊಂದಿಗೆ ಉದ್ಯೋಗಿ ಪರಾರಿ