ವಾಶಿಂಗ್ಟನ್: ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸುವ ಐದು ತಿಂಗಳು ಮುನ್ನವೇ ಅಮೆರಿಕವು ಉಕ್ರೇನ್ಗೆ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ಕಳುಹಿಸಿತ್ತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಒಪ್ಪಿಕೊಂಡಿದ್ದಾರೆ. ನ್ಯೂಯಾರ್ಕ್ಗೆ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಯುದ್ಧ ಆರಂಭವಾಗಲಿದೆ ಎಂಬುದು ನಮಗೆ ಗೊತ್ತಾಗಿತ್ತು. ಹೀಗಾಗಿ ಉಕ್ರೇನ್ ಅನ್ನು ಯುದ್ಧಕ್ಕೆ ಸಿದ್ಧಗೊಳಿಸುವುದಕ್ಕಾಗಿ ಸೆಪ್ಟೆಂಬರ್ 2021ರಿಂದ ಅಮೆರಿಕ ಉಕ್ರೇನ್ಗೆ ಬಿಲಿಯನ್ಗಟ್ಟಲೆ ಡಾಲರ್ಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸಿತ್ತು" ಎಂದರು.
"ನಾವು ಪ್ರತಿ ಬಾರಿ ಉಕ್ರೇನ್ಗೆ ಶಸ್ತ್ರಾಸ್ತ್ರಗಳನ್ನು ನೀಡಿದಾಗ ಅವನ್ನು ಬಳಸುವುದು ಮತ್ತು ನಿರ್ವಹಣೆ ಮಾಡುವುದು ಅವರಿಗೆ ತಿಳಿದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿತ್ತು" ಎಂದು ಅವರು ಹೇಳಿದರು.
ಯುದ್ಧವನ್ನು ಕೊನೆಗೊಳಿಸುವ ಸಮಯ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ಲಿಂಕೆನ್, "ಕದನ ವಿರಾಮ ಜಾರಿಗೆ ಬಂದರೆ ರಷ್ಯಾಕ್ಕೆ ವಿರಾಮ ಸಿಗಲಿದೆ. ಆದರೆ ಉಕ್ರೇನ್ ಇಂಥ ಆಕ್ರಮಣವನ್ನು ಮತ್ತೊಮ್ಮೆ ಎದುರಿಸಬಲ್ಲದು ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಕದನ ವಿರಾಮ ಆಗಬೇಕು. ಉಕ್ರೇನ್ಗೆ ನ್ಯಾಟೊ ಸದಸ್ಯತ್ವ ನೀಡುವ ಮೂಲಕ ಇದನ್ನು ಸಾಧಿಸಬಹುದು" ಎಂದು ಅವರು ನುಡಿದರು.
ಬ್ಲಿಂಕೆನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ, "ರಷ್ಯಾ ಈ ಬಗ್ಗೆ ಹಲವಾರು ವರ್ಷಗಳಿಂದ ಹೇಳುತ್ತಿದೆ. ಉಕ್ರೇನ್ನ ನಿಶಸ್ತ್ರೀಕರಣದ ಬಗ್ಗೆ ರಷ್ಯಾದ ಉದ್ದೇಶದ ಹಿಂದಿನ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ" ಎಂದರು.
"ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಉಕ್ರೇನ್ಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ನೀಡುತ್ತಿರುವ ಬಗ್ಗೆ, ರಷ್ಯಾದ ಗಡಿಗಳನ್ನು ಉಲ್ಲಂಘಿಸುವ ಕಪ್ಪು ಸಮುದ್ರದಲ್ಲಿ ನಿರಂತರ ನ್ಯಾಟೋ ಯುದ್ಧ ಅಭ್ಯಾಸಗಳು ಮತ್ತು ನಮ್ಮ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳಿಗೆ ಅಪಾಯಕಾರಿಯಾಗುವಷ್ಟು ಹತ್ತಿರದಲ್ಲಿ ಪಾಶ್ಚಿಮಾತ್ಯ ದೇಶಗಳ ಮಿಲಿಟರಿ ವಿಮಾನಗಳ ಹಾರಾಟದ ಬಗ್ಗೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ" ಎಂದು ಅವರು ಹೇಳಿದರು.
ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಪ್ರಕಾರ, ಸಂಘರ್ಷ ಆರಂಭವಾದ ನಂತರ ಸೋಮವಾರದವರೆಗೆ ಯುನೈಟೆಡ್ ಸ್ಟೇಟ್ಸ್ ಉಕ್ರೇನ್ಗೆ 61.4 ಬಿಲಿಯನ್ ಡಾಲರ್ ಮೊತ್ತದ ಮಿಲಿಟರಿ ಸಹಾಯವನ್ನು ಒದಗಿಸಿದೆ. ಅಲ್ಲದೆ ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್ಗೆ ಎಲ್ಲಾ ರೀತಿಯ 12,000 ಆಂಟಿ-ಆರ್ಮರ್ ವ್ಯವಸ್ಥೆಗಳು, 1,550 ಕ್ಕೂ ಹೆಚ್ಚು ವಾಯು ವಿರೋಧಿ ಕ್ಷಿಪಣಿಗಳು, ರಾಡಾರ್ಗಳು, ನೈಟ್ ವಿಷನ್ ಸಾಧನಗಳು, ಮಷಿನ್ ಗನ್ಗಳು, ರೈಫಲ್ಗಳು, ಮದ್ದುಗುಂಡುಗಳು ಮತ್ತು ದೇಹದ ಕವಚಗಳನ್ನು ಪೂರೈಸಲು ಅಮೆರಿಕ ಅನುಮೋದನೆ ನೀಡಿದೆ.
ಇದನ್ನೂ ಓದಿ : ಈ ನಗರದಲ್ಲಿ ಪ್ರಯಾಣಿಸಲು ಸಂಚಾರ ದಟ್ಟಣೆ ಶುಲ್ಕ ಪಾವತಿ ಕಡ್ಡಾಯ: ಎಲ್ಲಿ ಗೊತ್ತಾ? - TRAFFIC CONGESTION FEE