Maha Kumbh Mela 2025 Traveling Tips: ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಮಹಾ ಕುಂಭಮೇಳವು ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಮುಕ್ತಿ, ಮೋಕ್ಷ ಮಾರ್ಗವೆಂದು ಭಾವಿಸಿ ಪುಣ್ಯನದಿಗಳಲ್ಲಿ ಸ್ನಾನ ಮಾಡಲು ತೆರಳುತ್ತಾರೆ. ಮಹಾ ಕುಂಭಮೇಳಕ್ಕೆ ದೇಶ, ವಿದೇಶಿಗಳಿಂದ ಯಾತ್ರಾರ್ಥಿಗಳೂ ಆಗಮಿಸುತ್ತಾರೆ. ಜನವರಿ 13ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಲಿರುವ ಮಹಾ ಕುಂಭಮೇಳಕ್ಕೆ ನೀವೂ ಹೋಗಬಯಸುವಿರಾ? ಹಾಗಾದರೆ, ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.
ಪ್ರಯಾಣಕ್ಕೆ & ತಂಗಲು ಮುಂಗಡ ಕಾಯ್ದಿರಿಸಿ: ಮಹಾ ಕುಂಭಮೇಳಕ್ಕೆ ಹೋಗಬೇಕಾದರೆ ಪ್ರಯಾಣ ಮತ್ತು ತಂಗುವ ಕುರಿತು ಮುಂಗಡ ಕಾಯ್ದಿರಿಸಿಕೊಳ್ಳುವುದು ಉತ್ತಮ. ಏಕೆಂದರೆ ಲಕ್ಷಾಂತರ ಪ್ರವಾಸಿಗರು ಹಾಗೂ ಭಕ್ತರು ಪ್ರಪಂಚದಾದ್ಯಂತದ ಪ್ರಯಾಗ್ರಾಜ್ ಕುಂಭಮೇಳಕ್ಕೆ ಆಗಮಿಸುತ್ತಾರೆ. ಅಲ್ಲಿಗೆ ಹೋದ ನಂತರ ಯಾವುದೇ ತೊಂದರೆಯಾಗದಂತೆ ನೀವು ಮುಂಚಿತವಾಗಿ ಪ್ಲಾನ್ ಮಾಡಬೇಕು. ಕುಂಭಮೇಳಕ್ಕೆ ಹೋಗುವುದು ಹೇಗೆ? ಹೋದ ನಂತರ ಎಲ್ಲಿ ಉಳಿಯಬೇಕೆಂದು ಮೊದಲೇ ತಿಳಿದುಕೊಳ್ಳಿ. ಅಗತ್ಯವಿದ್ದರೆ ಸರ್ಕಾರಿ ಟ್ರಾವೆಲ್ ಏಜೆನ್ಸಿಗಳ ಸಹಾಯ ತೆಗೆದುಕೊಳ್ಳಬಹುದು.
ಅಗತ್ಯ ವಸ್ತುಗಳ ಪ್ಯಾಕಿಂಗ್: ಕುಂಭಮೇಳಕ್ಕೆ ಹೋಗುವ ಮೊದಲು, ನೀವು ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಬೇಕಾಗುತ್ತದೆ. ಅಲ್ಲಿಗೆ ತೆರಳಿದ ನಂತರ, ನಿಮಗೆ ಬೇಕಾಗಿರುವ ವಸ್ತುಗಳು ಇಲ್ಲ ಎನ್ನುವ ಒತ್ತಡಕ್ಕೆ ಒಳಗಾಗದಂತೆ ಬೇಕಾದ ಎಲ್ಲ ವಸ್ತುಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ನಡೆಯಲು ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿಕೊಳ್ಳಬೇಕಾಗುತ್ತದೆ. ಸ್ನಾನದ ನಂತರ, ಒದ್ದೆಯಾದಾಗ ಪಾದಗಳು ಜಾರದಂತೆ ಗ್ರಿಪ್ ಆಗಿರುವ ಸ್ಯಾಂಡಲ್ ಮತ್ತು ಶೂಗಳನ್ನು ಆಯ್ಕೆ ಮಾಡುವುದು ಉತ್ತಮವಾಗಿದೆ. ಅಲ್ಲಿನ ತಾಪಮಾನಕ್ಕೆ ಅನುಗುಣವಾಗಿ ಡ್ರೆಸ್ಸಿಂಗ್ ಮಾಡಬೇಕು. ಅಲ್ಲದೆ, ಔಷಧಗಳನ್ನು ಬಳಸುತ್ತಿರುವವರು ಸಹ ಅವುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಆರೋಗ್ಯದ ಬಗ್ಗೆ ಇರಲಿ ಕಾಳಜಿ: ಕುಂಭಮೇಳಕ್ಕೆ ಲಕ್ಷಾಂತರ ಜನರು ಬರುತ್ತಾರೆ. ಈ ಸಮಯದಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಚೀನಾದ ಎಚ್ಎಂಪಿ ವೈರಸ್ ಈಗಾಗಲೇ ಜನರನ್ನು ಭಯಭೀತಗೊಳಿಸುತ್ತಿರುವುದರಿಂದ, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ನಿಮ್ಮೊಂದಿಗೆ ತೆಗೆದುಕೊಳ್ಳಬೇಕು. ನೀವು ತಿನ್ನುವ ಆಹಾರ ಮತ್ತು ಕುಡಿಯುವ ನೀರಿನ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ತಿಂಡಿ ತಿನ್ನಬೇಕೆನಿಸಿದಾಗ ಹೊರಗಡೆ ತಿನ್ನುವ ಬದಲು ಮನೆಯಲ್ಲಿ ತಯಾರಿಸಿದ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಜೊತೆಗೆ ಸಾಕಷ್ಟು ಹಣ್ಣುಗಳನ್ನೂ ತೆಗೆದುಕೊಂಡು ಹೋಗಬೇಕು. ಪ್ರತ್ಯೇಕ ನೀರಿನ ಬಾಟಲಿಗಳನ್ನು ಕೊಂಡೊಯ್ಯಲು ಸಹ ತಜ್ಞರು ಸೂಚನೆ ನೀಡುತ್ತಾರೆ.
ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ: ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗದಿರುವುದು ಉತ್ತಮ. ಮೊಬೈಲ್ ಫೋನ್, ಹಣ ಮತ್ತು ಗುರುತಿನ ಚೀಟಿಗಳನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕಾಗುತ್ತದೆ. ಒಂಟಿಯಾಗಿ ಹೋಗುವ ಬದಲು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೋಗಬೇಕಾಗುತ್ತದೆ. ಜೊತೆಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಗದು ಹಣ ಹತ್ತಿರ ಇಟ್ಟುಕೊಳ್ಳಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಪಾವತಿಗಳು ಹೆಚ್ಚು ಸಾಮಾನ್ಯವಾಗಿದೆ. ಆದರೆ, ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹೋಗುವಾಗ ನಗದು ಹಣ ಹತ್ತಿರ ಇಟ್ಟುಕೊಳ್ಳಬೇಕು, ತುರ್ತು ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಎನ್ನುತ್ತಾರೆ ತಜ್ಞರು.
ಸ್ನಾನದ ವೇಳೆ ಎಚ್ಚರಿಕೆ ವಹಿಸಿ: ಸ್ನಾನಕ್ಕೆ ನದಿಯಲ್ಲಿರುವ ನೀರು ಪ್ರವೇಶಿಸುವಾಗ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಹೆಚ್ಚಿನ ಜನರು ಇರುವಾಗ ಕಾಲ್ತುಳಿತದ ಅಪಾಯವಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಸ್ನಾನ ಮಾಡಬೇಕು. ಈಜು ಬಾರದವರು ಆಳವಾದ ಸ್ಥಳಗಳಿಗೆ ಹೋಗಬಾರದು. ನದಿಯ ದಡದಲ್ಲಿ ಸ್ನಾನ ಮಾಡಬಾರದು ಎಂದು ತಜ್ಞರು ಸೂಚಿಸುತ್ತಾರೆ.
ಇದನ್ನೂ ಓದಿ: ಮಹಾ ಕುಂಭಮೇಳ, ವಾರಣಾಸಿ & ಅಯೋಧ್ಯೆಕ್ಕೆ ಕಡಿಮೆ ದರದಲ್ಲಿ IRCTC ಸೂಪರ್ ಟೂರ್ ಪ್ಯಾಕೇಜ್