ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪ್ರತಿಭೆ, ಕಲೆ, ಶ್ರಮ, ಸಿನಿಮಾಗೆ ಅವರ ಅಭಿನಯದ ಸಮರ್ಪಣೆಯಂತಹ ಅಂಶ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಲು ಸಹಾಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಸೆಲೆಬ್ರಿಟಿಯಾಗಲಿ ಅಥವಾ ಅಭಿಮಾನಿಯಾಗಲಿ ಪ್ರತಿಯೊಬ್ಬರೊಂದಿಗೂ ನಡೆದುಕೊಳ್ಳುವ ರೀತಿ, ಪ್ರೀತಿ-ವಾತ್ಸಲ್ಯದ ಗುಣ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್ಆರ್ಕೆ ದರ್ಶನ ಪಡೆದ ಅಭಿಮಾನಿಯೋರ್ವರು ಭಾವುಕರಾಗಿದ್ದು, ಅವರನ್ನು ಎಸ್ಆರ್ಕೆ ಸಮಾಧಾನಪಡಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಹೆಸರಾಂತ ನಟ, ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮೇಲೆ ತಮಗಿರುವ ಅಗಾಧ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ.
ಕಿಂಗ್ ಆಫ್ ರೊಮ್ಯಾನ್ಸ್ ಖ್ಯಾತಿಯ ಶಾರುಖ್ ಖಾನ್ ಅವರು ತಮ್ಮ ಇತ್ತೀಚಿನ ಚಿತ್ರ 'ಡಂಕಿ'ಯ ಯಶಸ್ಸಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಮುಂಬೈನಲ್ಲಿ ಸೋಮವಾರ ಸಂಜೆ ಫ್ಯಾನ್ಸ್ ಮೀಟ್ ಆ್ಯಂಡ್ ಗ್ರೀಟ್ ಈವೆಂಟ್ ನಡೆಯಿತು. ನಟನನ್ನು ಕಣ್ಣೆದುರು ಕಂಡ ಅಭಿಮಾನಿಯೋರ್ವರು ಭಾವುಕರಾದರು. ಭಾವುಕನಾದ ಅಭಿಮಾನಿಯನ್ನು ಶಾರುಖ್ ಸಮಾಧಾನಪಡಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಈ ಭಾವನಾತ್ಮಕ ಕ್ಷಣಗಳನ್ನು ಕಾಣಬಹುದಾಗಿದೆ. ಅಚ್ಚುಮೆಚ್ಚಿನ ನಟನನ್ನು ಕಂಡು ಕಣ್ಣೀರಿಡುತ್ತಾ, ನಡುಗುತ್ತಿದ್ದ ಅಭಿಮಾನಿಯನ್ನು ಶಾರುಖ್ ಬಹಳ ಪ್ರೀತಿಪೂರ್ವಕವಾಗಿ ಸಂತೈಸಿದ್ದಾರೆ.
ವೈರಲ್ ವಿಡಿಯೋಗಳಲ್ಲಿ 'ಡಂಕಿ' ಸ್ಟಾರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಾದಾ ಬ್ಲ್ಯಾಕ್ ಟೀ ಶರ್ಟ್ ಮತ್ತು ಬ್ಲ್ಯಾಕ್ ಲೆದರ್ ಜಾಕೆಟ್, ಬ್ಲ್ಯಾಕ್ ಪ್ಯಾಂಟ್ ಧರಿಸಿದ್ದರು. ಬ್ಲ್ಯಾಕ್ ಗ್ಲಾಸ್ ನಟನನ್ನು ಆಕರ್ಷಕವಾಗಿ ಕಾಣುವಂತೆ ಮಾಡಿತ್ತು. ತಮ್ಮನ್ನು ಭೇಟಿಯಾಗಲು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಹತ್ತಿರ ಬಂದ ಅಭಿಮಾನಿಯ ಕೈಹಿಡಿದರು. ಪರಸ್ಪರ ಸಂತಸದ ಕ್ಷಣಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿ ಭಾವುಕರಾದರು. ಈ ವೇಳೆ ಶಾರುಖ್ ಅಭಿಮಾನಿಯನ್ನು ಅಪ್ಪಿಕೊಂಡು ಸಮಾಧಾನ ಪಡಿಸಿದರು. ಶಾರುಖ್ ಸಹ ತಮ್ಮ ಅಭಿಮಾನಿಗಳ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ವ್ಯಕ್ತಿ ಸಹಜ ಸ್ಥಿತಿಗೆ ಬರೋವರೆಗೂ ಅವರ ಭುಜವನ್ನು ಹಿಡಿದು ಸಮಾಧಾನಪಡಿಸಿದರು. ಬಳಿಕ ಕ್ಯಾಮರಾಗಳಿಗೆ ಒಟ್ಟಿಗೆ ಪೋಸ್ ನೀಡಿದನು.