ಬೆಂಗಳೂರು: ಆನ್ಲೈನ್ ವಂಚನೆಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ವಂಚನೆಗೆ ಒಳಗಾಗುವ ಪ್ರಕರಣಗಳು ಮಾತ್ರ ನಿಂತಿಲ್ಲ. ಒಎಲ್ಎಕ್ಸ್ ವೆಬ್ಸೈಟ್ನಲ್ಲಿ ಐಫೋನ್ ಮೊಬೈಲ್ ಮಾರಾಟ ಜಾಹೀರಾತು ಕಂಡು ಅದನ್ನು ಕಡಿಮೆ ದರಕ್ಕೆ ಖರೀದಿಸಲು ಹೋದ ವಿದ್ಯಾರ್ಥಿಗೆ 1.05 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದೆ.
ರಾಯನ್ ಹುಸೇನ್ ಅಹಮದ್ ಹಣ ಕಳೆದುಕೊಂಡ ವಿದ್ಯಾರ್ಥಿ. ತಾನು ವಂಚನೆಗೆ ಒಳಗಾದ ಬಗ್ಗೆ ದೂರು ನೀಡಿದ ಹಿನ್ನೆಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಾಟ್ಸ್ಆ್ಯಪ್ ಮೂಲಕ ಕುದುರಿದ ವಹಿವಾಟು: ಆರ್.ಟಿ. ನಗರದ ನಿವಾಸಿಯಾದ ರಾಯನ್, ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಬೇಕು ಎಂದು ಆತ ಹಲವು ದಿನಗಳಿಂದ ಬಯಕೆ ಹೊಂದಿದ್ದ. ಅದರಂತೆ ಕಡಿಮೆ ದರಕ್ಕೆ ಸಿಗುವ ಒಎಲ್ಎಕ್ಸ್ ಜಾಲತಾಣದಲ್ಲಿ ಶೋಧ ನಡೆಸಿದ್ದಾನೆ. ಇದೇ ಮಾದರಿಯ ಐಫೋನ್ ಅನ್ನು ವಂಚಕ ಕಿರಣ್ ಎಂಬಾತ ಮಾರಾಟ ಮಾಡುವುದಾಗಿ ವೆಬ್ಸೈಟ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ.
ಕಿರಣ್ನ ಫೋನ್ ನಂಬರ್ ಪಡೆದ ರಾಯನ್ ಆತನನ್ನು ಸಂಪರ್ಕಿಸಿದ್ದಾನೆ. ಬಳಿಕ ಮೊಬೈಲ್ ಮಾರಾಟದ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಚರ್ಚಿಸಿದ್ದಾರೆ. ಕೊನೆಗೆ 1.05 ಲಕ್ಷ ರೂಪಾಯಿ ದರಕ್ಕೆ ವ್ಯಾಪಾರ ಕುದುರಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶಕ್ಕೆ ಬಂದಿದ್ದು, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಚಾಯಾಸ್ ಕೆಫೆ ಬಳಿ ಹೋಗಿ ತನ್ನ ಸ್ನೇಹಿಯ ಸಲ್ಮಾನ್ ಎಂಬಾತನಿಂದ ಮೊಬೈಲ್ ತೆಗೆದುಕೊಳ್ಳುವಂತೆ ಆರೋಪಿ ಕಿರಣ್ ಸೂಚಿಸಿದ್ದಾನೆ.
ಆರೋಪಿ ಫೋನ್ ಸ್ವಿಚ್ಆಫ್: ಇದನ್ನು ನಂಬಿದ ರಾಯನ್ ಆರೋಪಿಯ ಸೂಚನೆ ಮೇರೆಗೆ ಜನವರಿ 12 ರಂದು ಚಾಯಾಸ್ ಕೆಫೆಗೆ ತೆರಳಿದ್ದಾನೆ. ಇದಕ್ಕೂ ಮುನ್ನ ಕಿರಣ್ನ ಬ್ಯಾಂಕ್ ಖಾತೆಗೆ 1.05 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾನೆ. ಕೆಫೆಯಲ್ಲಿ ಸಲ್ಮಾನ್ನನ್ನು ಭೇಟಿಯಾಗಿ ಮೊಬೈಲ್ ನೀಡುವಂತೆ ಕೇಳಿದಾಗ, ಹಣ ಕೊಡುವಂತೆ ಕೇಳಿದ್ದಾನೆ. ಆಗ ರಾಯನ್ ಕಿರಣ್ಗೆ ನೀಡಿದ್ದಾಗಿ ತಿಳಿಸಿದ್ದಾನೆ.
ಈ ವೇಳೆ ಸಲ್ಮಾನ್ ತನಗೆ ಹಣ ಪಾವತಿಸಬೇಕು ಇಲ್ಲವಾದಲ್ಲಿ ಮೊಬೈಲ್ ಕೊಡಲ್ಲ ಎಂದಿದ್ದಾನೆ. ತಕ್ಷಣವೇ ಕಿರಣ್ಗೆ ಕರೆ ಮಾಡಿದಾಗ, ಆತನ ಮೊಬೈಲ್ ಸ್ವಿಚ್ಆಫ್ ಆಗಿದೆ. ಸಲ್ಮಾನ್ ಫೋನ್ ನೀಡದೆ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ರಾಯನ್ ತಾನು ಮೋಸ ಹೋದ ಬಗ್ಗೆ ಅರಿವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಕಡಿಮೆ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಐಫೋನ್ ಖರೀದಿಸಲು ಹಲವು ದಿನಗಳಿಂದ ಹಣ ಸಂಗ್ರಹಿಸಿದ್ದೆ. 1.50 ಲಕ್ಷ ರೂಪಾಯಿ ಮೊಬೈಲ್ ಅನ್ನು 1.05 ಲಕ್ಷ ರೂಪಾಯಿಗೆ ನೀಡುವಂತೆ ಆರೋಪಿಗೆ ಒಪ್ಪಿಸಿದೆ. ಇದೀಗ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ರಾಯನ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ಹೂಡಿಕೆ ಹೆಸರಿನಲ್ಲಿ 38 ಲಕ್ಷ ರೂ.ಗೂ ಹೆಚ್ಚು ವಂಚನೆ; ಎರಡು ಪ್ರತ್ಯೇಕ ಪ್ರಕರಣ ದಾಖಲು