ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಸಿದ್ದೇಶ್ವರರ ಮಹಾರಥೋತ್ಸವ 8 ಲಕ್ಷ ಜನ ಭಕ್ತ ಸಾಗರದ ಮಧ್ಯೆ ಬುಧವಾರ ಸಂಜೆ ಪುಷ್ಯ ಮಾಸದ ಬಹುಳ ಬಿದಿಗೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಹಿಂದೂಸ್ಥಾನಿ ಸಂಗೀತದ ಮೇರು ಪರ್ವತ ಪಂಡಿತ, ಪದ್ಮಶ್ರೀ ಪುರಸ್ಕೃತ ಎಂ.ವೆಂಕಟೇಶ್ ಕುಮಾರ್ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಪ್ರತಿಯೊಬ್ಬ ಮನುಷ್ಯನಿಗೆ ದೇವರು ಒಂದು ಸುಂದರ ಜೀವನ ನೀಡಿದ್ದಾನೆ. ಅದು ಈ ನಿಸರ್ಗದ ದೊಡ್ಡ ಕೊಡುಗೆ. ಆ ಕೊಡುಗೆಯನ್ನು ನಾವೆಲ್ಲರೂ ಜೋಪಾನವಾಗಿ ಕಾಯ್ದಕೊಳ್ಳಬೇಕು. ಹೆಂಗ ಕಾಯ್ದಕೊಳ್ಳಬೇಕು ಅಂದ್ರೆ ಆ ದೇವರೇ ನಿಮ್ಮ ಬದುಕು ನೋಡಿ ಸಂತೋಷಪಡಬೇಕು, ಹಂಗ ಪ್ರತಿಯೊಬ್ಬರೂ ಬದುಕುಬೇಕು ಎಂದರು.
ಯಾವುದೂ ಶೂರಿಟಿ ಇಲ್ಲದೆ 100 ವರ್ಷದ ಬದುಕನ್ನು ದೇವರು ನಮಗೆ ನೀಡಿದ್ದಾನೆ. ಜೊತೆಗೆ ಎಂದೂ ಆರದ ಸೂರ್ಯ, ಚಂದ್ರ ರೆಂಬ ಎರಡು ಬೆಳಕು ಕೊಟ್ಟಾನ. ಅದಕ್ಕೆ ಯಾವತ್ತೂ ಕರೆಂಟ್ ಬಿಲ್ ಕಟ್ಟಿ ಅಂತ ಅನ್ನಲಿಲ್ಲ. ನೀರಿಗಾಗಿ ಮೋಡ, ಮಳೆ, ಹಳ್ಳ, ನದಿ, ಸಮುದ್ರ ಕೊಟ್ಟಾನ. ಯಾವತ್ತೂ ವಾಟರ್ ಬಿಲ್ ಕೇಳಲಿಲ್ಲ. ಉಸಿರಾಟಕ್ಕೆ ಗಾಳಿ ಕೊಟ್ಟಾನ. ಒಂದು ಕ್ಷಣ ಬಿಡಲಾರದಂಗ ಉಸಿರಾಡತೀವಿ. ಅದಕ್ಕೆ ವೆಂಟಿಲೇಶನ್ ಬಿಲ್ ಕೇಳಲಿಲ್ಲ. ನಾವು ಈ ಭೂಮಿಗೆ ಬರೋಕು ಮುಂಚೆ ನಮ್ಮ ತಾಯಿ ಮೊಲೆಯಲ್ಲಿ ಹಾಲಿಟ್ಟು ಕಳಿಸಿದ್ದಾರೆ. ಒಮ್ಮೆಯೂ ಮಿಲ್ಕ್ ಬಿಲ್ ಕಟ್ಟಿ ಅಂತ ಅನ್ನಲಿಲ್ಲ. ಮತ್ಯಾಕ ಅಳತಿರಿ? ಯಾರೂ ಗೊಣಗಬಾರದು. ಜೀವನದಲ್ಲಿ ಎಲ್ಲ ಕಳಕೊಂಡೆವು ಅಂತ ಗೊಣಗಬ್ಯಾಡರಿ. ದೇವರು ಕೊಟ್ಟ ಈ ಸಮೃದ್ಧವಾದ ಬದಕನ್ನ ಭರವಸೆಯಿಂದ ಬಾಳಿ ಎಂದು ತಿಳಿ ಹೇಳಿದರು.
ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಪಂಡಿತ ಪದ್ಮಶ್ರೀ ಎಂ. ವೆಂಕಟೇಶ್ ಕುಮಾರ್ ಅವರು ಧಾರವಾಡದವರು. ಕಡು ಬಡತನದಲ್ಲಿ ಬೆಳೆದವರು. ಶಾಲೆಯೇ ಇಲ್ಲದ ಊರಲ್ಲಿ ಹುಟ್ಟಿದವರು. ನಮ್ಮ ಗವಿಸಿದ್ದೇಶ್ವರ ಹೈಸ್ಕೂಲಿನಲ್ಲಿ 10ನೇ ತರಗತಿ ಓದಿದ್ದಾರೆ. ಇಂದು ದೇಶವೇ ಅವರಿಗೆ ಪದ್ಮಶ್ರೀ ಪದವಿ ಕೊಟ್ಟು ಗೌರವಿಸಿದೆ. ಅಂತಹ ಸಾಧನೆಯನ್ನ ತಾವೆಲ್ಲ ಮಾಡಿ. ಜೇಬು ಖಾಲಿ ಇದ್ದಾಗಲೇ ಬದುಕಿನ ನೋರು ಪಾಠ ಕಲಿಯಲು ಸಾಧ್ಯ. ಇಲ್ಲಿ ಸೇರಿರುವ ತಾವೆಲ್ಲರೂ ಸಾವಧಾನ, ಸಮಾಧಾನದಿಂದ ನಿಮ್ಮ ನಿಮ್ಮ ಮನೆಗಳನ್ನ ಸೇರಿದಾಗ ಮಾತ್ರ ಗವಿಸಿದ್ದೇಶ್ವರ ಜಾತ್ರೆ ಸಂಪನ್ನ. ಮುಂದಿನ ಜಾತ್ರೆಗೆ ತಪ್ಪದೇ ಬನ್ನಿ. ಈ ಮೂಲಕ ಈಗಲೇ ತಮ್ಮೆಲ್ಲರನ್ನ ಆಮಂತ್ರಿಸುತ್ತಿರುವೆ ಎಂದು ಅಭಿನವ ಶ್ರೀಗಳು ಹೇಳಿದರು.