ಬಟಿಂಡಾ (ಪಂಜಾಬ್) : ತೀವ್ರ ಚಳಿಯಿಂದ ಉತ್ತರ ಭಾರತ ಗಡಗಡ ನಡುಗುತ್ತಿದೆ. ಬೆಚ್ಚನೆಯ ಅನುಭೂತಿ ಪಡೆಯಲು ಜನರು ಏನೇನೋ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಪಂಜಾಬ್ನ ಬಟಿಂಡಾದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಸಮಸ್ಯೆ ಅನುಭವಿಸಿದಂತೆ ಹಾಸಿಗೆ, ಹೊದಿಕೆ ಮತ್ತು ಹೀಟರ್ಗಳನ್ನು ನೀಡಲಾಗಿದೆ. ಅವುಗಳು ಕಳುವಾಗದಂತೆ ವಿಶೇಷ ಭದ್ರತೆಯನ್ನೂ ಒದಗಿಸಲಾಗಿದೆ.
ಹಾಸಿಗೆ, ಹೊದಿಕೆಗಳಿಗೆ ಭದ್ರತೆಯೇ?, ನಿಜ. ಈ ಆಸ್ಪತ್ರೆಯಲ್ಲಿ ಕೊಡಮಾಡಲಾದ ವಸ್ತುಗಳಿಗೆ ಆರೋಗ್ಯ ಇಲಾಖೆ 'ಲಾಕ್ ಸಿಸ್ಟಂ' ಮಾಡಿದೆ. ಅಂದರೆ, ಆಯಾ ಬೆಡ್ಗೆ ಕೊಟ್ಟ ಹಾಸಿಗೆ, ಹೊದಿಕೆಗಳು ಕಳುವಾಗದಂತೆ ತಡೆಯಲು ಕಬ್ಬಿಣದ ಸರಪಳಿಯನ್ನು ಬಿಗಿದು ಅವುಗಳಿಗೆ ಕೀಲಿ ಹಾಕಿ ಬಂಧಿಸಲಾಗಿದೆ.
ಆರೋಗ್ಯ ಇಲಾಖೆಯ ಈ ನಡೆಯು ಎಲ್ಲೆಡೆ ಚರ್ಚೆಯಾಗುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೊಟ್ಟ ವಸ್ತುಗಳನ್ನು ಲಾಕ್ ಮಾಡಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಆಸ್ಪತ್ರೆಯ ವೈದ್ಯಾಧಿಕಾರಿ, ಇಲ್ಲಿಗೆ ದಾಖಲಾಗುವ ರೋಗಿಗಳಿಗೆ ಅನುಕೂಲವಾಗಲಿ ಎಂದು ಈ ಕ್ರಮ ವಹಿಸಲಾಗಿದೆ ಎಂದಿದ್ದಾರೆ.
ಹಾಸಿಗೆ, ಹೊದಿಕೆಗೆ ಲಾಕ್: ವಾರ್ಡ್ಗಳಲ್ಲಿ ದಾಖಲಾದ ರೋಗಿಗಳಿಗೆ ಇರುವ ಪ್ರತ್ಯೇಕ ಬೆಡ್ಗಳಿಗೆ ಹಾಸಿಗೆ, ಹೊದಿಕೆಗಳನ್ನು ನೀಡಲಾಗಿದೆ. ಅವುಗಳನ್ನು ಕಾಲಿನ ಭಾಗದಲ್ಲಿ ಸರಪಳಿ ಬಿಗಿದು ಅದಕ್ಕೆ ಕೀಲಿಯನ್ನು ಹಾಕಲಾಗಿದೆ. ಆರೋಗ್ಯ ಇಲಾಖೆಯ ಈ ವಿಧಾನವು ಅಚ್ಚರಿ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಆಸ್ಪತ್ರೆಯಲ್ಲಿ ಇರುವ ವಸ್ತುಗಳಿಗೆ ಭದ್ರತೆ ಇಲ್ಲವಾದರೆ, ಇಲ್ಲಿಗೆ ಬರುವ ರೋಗಿಗಳಿಗೆ ಆರೋಗ್ಯ ಭದ್ರತೆ ಇದೆಯಾ ಎಂದು ಸಾಮಾಜಿಕ ಕಾರ್ಯಕರ್ತ ಗುರ್ವಿಂದರ್ ಶರ್ಮಾ ಅವರು ಆರೋಗ್ಯ ಇಲಾಖೆಗೆ ಪ್ರಶ್ನಿಸಿದ್ದಾರೆ.
ಆಸ್ಪತ್ರೆಯಲ್ಲೂ ಕಳ್ಳತನ ನಡೆಯುತ್ತಿದೆ ಎಂದಾದರೆ, ಜನರಿಗೆ ಕಾನೂನು ಮತ್ತು ಪೊಲೀಸ್ ಇಲಾಖೆಯ ಭಯ ಇಲ್ಲವಾಗಿದೆ. ಸರ್ಕಾರಿ ಆಸ್ತಿಯನ್ನು ರಕ್ಷಿಸಲು ಆಸ್ಪತ್ರೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಇರಿಸಬೇಕೆಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ವೈದ್ಯಾಧಿಕಾರಿ ಹೇಳಿದ್ದೇನು?: ಹಿರಿಯ ವೈದ್ಯಾಧಿಕಾರಿ ಡಾ. ಪ್ರೀತ್ ಮಣೀಂದರ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇಲ್ಲಿಗೆ ದಾಖಲಾಗುವ ರೋಗಿಗಳು ಬಿಡುಗಡೆಯಾದ ಬಳಿಕ ಆಯಾ ಬೆಡ್ಗಳಿಗೆ ನೀಡಲಾದ ಹೊದಿಕೆಗಳನ್ನು ತೆಗೆದುಕೊಂಡ ಹೋದ ಪ್ರಕರಣಗಳಿವೆ. ನಂತರದಲ್ಲಿ ಅಲ್ಲಿಗೆ ಬಂದವರಿಗೆ ಹೊದಿಕೆ ಸಿಗದೆ ಪರದಾಡುತ್ತಾರೆ. ಹೀಗಾಗಿ ಅವುಗಳು ಕಳುವು ಮತ್ತು ನಾಪತ್ತೆಯಾಗದಿರಲಿ ಎಂದು ಸರಪಳಿ ಹಾಕಿ ಬಿಗಿಯಲಾಗಿದೆ ಎಂದರು.
ಇದನ್ನೂ ಓದಿ: ಪ್ರಾಣಾಂತಕವಾದ ಚಳಿ: ದೆಹಲಿಯಲ್ಲಿ 474 ನಿರಾಶ್ರಿತರು ಸಾವು, ರಕ್ಷಣೆಗಾಗಿ ಸರ್ಕಾರಕ್ಕೆ ಎನ್ಜಿಒ ಪತ್ರ