ಗಂಗಾವತಿ: ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕ ಅಚಾನಕ್ಕಾಗಿ ಆಳ ನೀರಿಗೆ ಬಿದ್ದು ಮುಳುಗುತ್ತಿರುವಾಗ ಇಸ್ರೇಲ್ ದೇಶದ ಪ್ರವಾಸಿಗ ಇದನ್ನು ಕಂಡು ತನ್ನ ಪ್ರಾಣದ ಹಂಗು ತೊರೆದು ನದಿಗೆ ಧುಮುಕಿ ಆ ಯುವಕನನ್ನು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಯುವಕ ಅಪಾಯಕ್ಕೆ ಸಿಲುಕಿದಾತ. ಮಾರ್ಕಮ್ ಕಾಪಾಡಿದ ಇಸ್ರೇಲಿ ಪ್ರವಾಸಿ. ಗಂಗಾವತಿ ತಾಲ್ಲೂಕಿನ ಸಣಾಪುರ ಗ್ರಾಮದ ಲೊಕೋಪಯೋಗಿ ಇಲಾಖೆಯ ನಿರೀಕ್ಷಣಾ ಮಂದಿರದ (ಐಬಿ) ಬಳಿಯ ತುಂಗಭದ್ರಾ ನದಿಯಲ್ಲಿ ಯುವಕ ತನ್ನ ಸ್ನೇಹಿತರೊಂದಿಗೆ ಈಜಾಡಲು ಆಗಮಿಸಿದ್ದಾನೆ. ಈ ವೇಳೆ ನದಿ ಪಾತ್ರದಲ್ಲಿ ತಿರುಗುತ್ತಿದ್ದಾಗ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾನೆ.
ಹಂಪೆ-ಆನೆಗೊಂದಿಯ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ದೇಶದ ಮಾರ್ಕಮ್ ಎಂಬ ವಿದೇಶಿಗ ಇದೇ ವೇಳೆ ಸುತ್ತಾಟಕ್ಕೆ ಬಂದಿದ್ದಾನೆ. ಯುವಕ ನದಿಯಲ್ಲಿ ಮುಳುಗುತ್ತಿದ್ದುದನ್ನು ಕಂಡಿದ್ದಾರೆ. ಕಾಪಾಡಲು ತಕ್ಷಣವೇ ನದಿಗೆ ಧುಮುಕಿದ್ದಾರೆ. ನದಿಯಲ್ಲಿ ತೆಪ್ಪ ಹಾಕುವ ಕೆಲಸ ಮಾಡುವ ಮುರಳಿ ಎಂಬಾತನ ನೆರವಿನಿಂದ ನೀರಿಗೆ ಯುವಕನನ್ನು ಇಸ್ರೇಲ್ ಪ್ರವಾಸಿ ರಕ್ಷಣೆ ಮಾಡಿದ್ದಾರೆ.
ಸ್ನೇಹಿತರೊಂದಿಗೆ ಬಂದಿದ್ದ ಅಪಾಯಕ್ಕೆ ಸಿಲುಕಿದ್ದ ಮುನಿರಾಬಾದಿನ ಯುವಕ, ಅಂಜನಾದ್ರಿ, ಪಂಪಾ ಸರೋವರ ಸೇರಿದಂತೆ ಹಲವೆಡೆ ಭೇಟಿ ನೀಡಿ ನದಿಯಲ್ಲಿ ಸ್ನಾನಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಟ್ವಿಸ್ಟ್ - ಹಿಟ್ ಅಂಡ್ ರನ್ ಕೇಸ್ ದಾಖಲು: ಎಸ್ಪಿ ಡಾ.ಭೀಮಾಶಂಕರ ಗುಳೇದ