ಮಂಗಳೂರು (ದಕ್ಷಿಣ ಕನ್ನಡ): ಇದೀಗ 'AI' ಜಮಾನ. ಎಲ್ಲಾ ರಂಗದಲ್ಲೂ 'AI' ತಂತ್ರಜ್ಞಾನದ ಬಳಕೆ ವ್ಯಾಪಕವಾಗಿ ನಡೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಉಪೇಂದ್ರ ಅವರ UI ಚಿತ್ರದಲ್ಲೂ AI ಬಳಕೆ ಮಾಡಲಾಗಿತ್ತು. ಇದೀಗ ತುಳು ಸಿನಿಮಾ 'ಮೀರಾ'ದಲ್ಲಿ ಹಾಡೊಂದನ್ನು AI ಮೂಲಕ ಹಾಡಿಸಲಾಗಿದೆ.
ತುಳು ಚಿತ್ರ ಮೀರಾ ಫೆಬ್ರವರಿ 21ರಂದು ತೆರೆಗೆ ಬರಲಿದೆ. ತುಳು ಸಿನಿಮಾ ರಂಗದಲ್ಲಿ ವಿಭಿನ್ನ ಪ್ರಯತ್ನವಾಗಿದೆ. ಈ ಸಿನಿಮಾದಲ್ಲಿ ಒಂದು ಹಾಡನ್ನು ಎಐ ಮೂಲಕ ಹಾಡಿಸಲಾಗಿದೆ. ಈ ಹಾಡು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಎಐ ಹಾಡಿದ ಹಾಡು ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಾಡಿನ ಬಗ್ಗೆ ಮಾತನಾಡಿದ ಮೀರಾ ಸಿನಿಮಾ ನಿರ್ದೇಶಕ ಅಶ್ವಥ್, ಎಐ ಮೂಲಕ ಸಿನಿಮಾ ಸಾಂಗ್ ರಚಿಸುವುದು ಕೊನೆಯ ಕ್ಷಣದಲ್ಲಿ ಬಂದ ಯೋಚನೆ. ಎಐ ನಲ್ಲಿ ವಾಯ್ಸ್ ಸ್ವಾಪಿಂಗ್ ತಂತ್ರಜ್ಞಾನ ಉಪಯೋಗಿಸಿ ಈ ಹಾಡು ರಚಿಸಲಾಗಿದೆ. ಮ್ಯೂಸಿಕ್ ಕಂಪೋಸ್ ಮಾಡಿ ಮ್ಯೂಸಿಕ್ ಡೈರೆಕ್ಟರ್ ಹಾಡನ್ನು ಹಾಡಿದರು. ಅವರು ಹಾಡಿದ್ದನ್ನು ವಾಯ್ಸ್ ಸ್ವಾಪಿಂಗ್ ಮಾಡಿ ಹಾಡು ತಯಾರಿಸಲಾಗಿದೆ. ಇದರ ಮ್ಯೂಸಿಕ್ ನಾವೇ ಕಂಪೋಸ್ ಮಾಡಿದ್ದು, ಹಾಡು ಮಾತ್ರ ಎಐ ನಿಂದ ಹಾಡಿಸಲಾಗಿದೆ ಎಂದರು.
ಫೆ.21ಕ್ಕೆ ಮೀರಾ ಚಲನಚಿತ್ರ ತೆರೆಗೆ: ಅಸ್ತ್ರ ಪ್ರೊಡಕ್ಷನ್ ಬ್ಯಾನರ್ನಲ್ಲಿ ಲಂಚುಲಾಲ್ ಕೆ.ಎಸ್ ನಿರ್ಮಿಸಿರುವ, ಅಶ್ವಥ್ ನಿರ್ದೇಶನದ 'ಮೀರಾ' ಫೆಬ್ರವರಿ 21ಕ್ಕೆ ಬಿಡುಗಡೆಯಾಗಲಿದೆ. ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಮೀರಾ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತುಮಿನಾಡು, ಪ್ರಕಾಶ್ ತುಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವೋರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್ ಮೊದಲಾದ ಹೆಸರಾಂತ ಕಲಾವಿದರ ಜತೆ ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಬಿಗ್ ಶಾಕ್: ನಡುರಾತ್ರಿ ಮನೆಯಿಂದ ಹೊರಹೋದ್ರು ಸ್ಪರ್ಧಿ!
ಮೀರಾ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಸಂಕಲನ ಜಾಬಿನ್ಸ್ ಸೆಬಾಸ್ಟಿಯನ್ ನಿರ್ವಹಿಸುತ್ತಿದ್ದು, ಸಂಗೀತ ಸಂಯೋಜನೆ ರಜ್ಜು ಜಯಪ್ರಕಾಶ್ ಅವರದ್ದು. ಗೀತೆರಚನೆಯನ್ನು ಜಯಪ್ರಕಾಶ್ ಕಳೇರಿ ನಿರ್ವಹಿಸುತ್ತಿದ್ದಾರೆ. ಮಲಯಾಳಂ ಸಿನೆಮಾ 'ಭ್ರಮಯುಗಂ' ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಎಸ್.ಎಫ್.ಎಕ್ಸ್ ಮತ್ತು ಅಂತಿಮ ಮಿಶ್ರಣವನ್ನು ಯುನಿಟಿ ಸ್ಟುಡಿಯೋಸ್ ನಿರ್ವಹಿಸಿದ್ದು, ಜಿತಿನ್ ಕುಂಬ್ಳೆ ಸಹಾಯಕ ನಿರ್ದೇಶಕರಾಗಿ, ಜಯ ಸುವರ್ಣ ಮೇಕ್‌ಅಪ್ ಹಾಗೂ ಪಿ.ಆರ್.ಒ ಆಗಿ ಬಾಳ ಜಗನ್ನಾಥ ಶೆಟ್ಟಿ ಉಸ್ತುವಾರಿ ವಹಿಸಿದ್ದಾರೆ. ಚಿತ್ರದಲ್ಲಿ 5 ಹಾಡುಗಳಿದ್ದು, ದಕ್ಷಿಣ ಭಾರತ ಹೆಸರಾಂತ ಹಿನ್ನೆಲೆ ಗಾಯಕರಾದ ಮಧುಬಾಲಕೃಷ್ಣ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿದೆ.
ಇದನ್ನೂ ಓದಿ: ನಾನು ತುಳುನಾಡಿನವ, ತುಳು ಸಿನಿಮಾ ಮಾಡುತ್ತಿರುವುದು ಹೆಮ್ಮೆಯ ಕ್ಷಣ: ಜೈ ಶೂಟಿಂಗ್ ಆರಂಭಿಸಿದ ಸುನೀಲ್ ಶೆಟ್ಟಿ
ತನ್ನ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳಲಿದೆ. ಈ ಚಲನಚಿತ್ರವು ಮಹಿಳೆಯರಿಗೆ ಅವರ ಕನಸನ್ನು ಜಯಿಸಲು ಮತ್ತು ಸಾಧಿಸಲು ಸ್ಫೂರ್ತಿ ನೀಡುತ್ತದೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳ ಮತ್ತು ಕರಾವಳಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ 'ಮೀರಾ' ಫೆಬ್ರವರಿ 21 ರಂದು ಬಿಡುಗಡೆಯಾಗಲಿದೆ.