ವಿಶ್ವಾದ್ಯಂತ ಪರಿಚಿತರಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರು 77ನೇ ಲೊಕಾರ್ನೋ ಚಲನಚಿತ್ರೋತ್ಸವದಲ್ಲಿ (77th Locarno Film Festival) ಅತ್ಯುನ್ನತ ಗೌರವಕ್ಕೆ ಪಾತ್ರರಾಗಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟನ ವೃತ್ತಿಜೀವನವನ್ನು ಗುರುತಿಸಿ ಪ್ರತಿಷ್ಠಿತ ಪಾರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ-ಲೊಕಾರ್ನೋ ಪ್ರಶಸ್ತಿ (Pardo alla Carriera Ascona-Locarno award) ನೀಡಲು ಸಿದ್ಧತೆ ನಡೆಯುತ್ತಿದೆ. ಆಗಸ್ಟ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕೆರಿಯರ್ ಅಚೀವ್ಮೆಂಟ್ ಅವಾರ್ಡ್ - ಪಾರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ - ಲೊಕಾರ್ನೋ ವನ್ನು ಆಗಸ್ಟ್ 10ರ ಶನಿವಾರ ಸಂಜೆ ಪಿಯಾಝಾ ಗ್ರಾಂಡೆಯಲ್ಲಿ ನಡೆಯಲಿರುವ ಲೊಕಾರ್ನೋ ಚಲನಚಿತ್ರೋತ್ಸವದಲ್ಲಿ ಹಸ್ತಾಂತರಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಈ ಹಿಂದೆ ಫ್ರಾನ್ಸೆಸ್ಕೊ ರೋಸಿ, ಕ್ಲೌಡ್ ಗೊರೆಟ್ಟಾ, ಬ್ರೂನೋ ಗ್ಯಾಂಜ್, ಕ್ಲೌಡಿಯಾ ಕಾರ್ಡಿನೇಲ್, ಜಾನಿ ಟು, ಹ್ಯಾರಿ ಬೆಲಾಫೊಂಟೆ ಸೇರಿದಂತೆ ಹಲವು ಗಣ್ಯರಿಗೆ ನೀಡಲಾಗಿದೆ. 2023ರಲ್ಲಿ ತ್ಸೈ ಮಿಂಗ್ ಲಿಯಾಂಗ್ ಈ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದರು.
ಚಲನಚಿತ್ರೋತ್ಸವದ ಭಾಗವಾಗಿ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬ್ಲಾಕ್ಬಸ್ಟರ್ ಚಿತ್ರ ದೇವ್ದಾಸ್ (2002) ವಿಶೇಷ ಪ್ರದರ್ಶನ ನಡೆಯಲಿದೆ. ಈ ಚಿತ್ರದಲ್ಲಿ ಎಸ್ಆರ್ಕೆ ನಾಯಕನ ಪಾತ್ರ ಮಾಡಿದ್ದು, ಅವರ ಜನಪ್ರಿಯತೆಯನ್ನು ಸಾಕಷ್ಟು ಹೆಚ್ಚಿಸಿತ್ತು. ಸ್ಪೆಷಲ್ ಸ್ಕ್ರೀನಿಂಗ್ ಅಲ್ಲದೇ, ಕಿಂಗ್ ಖಾನ್ ಆಗಸ್ಟ್ 11ರಂದು ಸ್ಪಾಜಿಯೋ ಸಿನಿಮಾದಲ್ಲಿ ನಡೆಯಲಿರುವ ಫೋರಂನಲ್ಲಿ ಮಾತನಾಡಲಿದ್ದಾರೆ.