ಬೆಂಗಳೂರು: ಸ್ಯಾಂಡಲ್ವುಡ್ ನಟ, ನಿರ್ದೇಶಕ ಗುರುಪ್ರಸಾದ್ (52) ಮಾದನಾಯಕಹಳ್ಳಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುರುಪ್ರಸಾದ್ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್ಮೆಂಟ್ನಲ್ಲಿ ಗುರುಪ್ರಸಾದ್ ವಾಸವಾಗಿದ್ದರು. ಸುತ್ತಮುತ್ತಲಿನ ಮನೆಯ ನಿವಾಸಿಗಳಿಗೆ ಕೆಟ್ಟ ವಾಸನೆ ಬಂದ ಹಿನ್ನೆಲೆ ಮನೆಯನ್ನ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
'ಮಠ' ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಗುರುಪ್ರಸಾದ್, 'ಎದ್ದೇಳು ಮಂಜುನಾಥ', 'ಡೈರೆಕ್ಟರ್ ಸ್ಪೆಷಲ್' ಸೇರಿದಂತೆ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜಗ್ಗೇಶ್ ನಟನೆಯ 'ರಂಗನಾಯಕ' ಇವರ ನಿರ್ದೇಶನದ ಕೊನೆಯ ಸಿನಿಮಾ ಆಗಿತ್ತು. 1972ರ ನವೆಂಬರ್ 2ರಂದು ಗುರುಪ್ರಸಾದ್ ಜನಿಸಿದ್ದರು. ನಿನ್ನೆ ಇವರ ಜನ್ಮದಿನವಿತ್ತು.
ಗುರುಪ್ರಸಾದ್ ಸಿನಿ ಜರ್ನಿ:2006ರಲ್ಲಿ ಬಿಡುಗಡೆಯಾದ 'ಮಠ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಗುರುಪ್ರಸಾದ್ ಎಂಟ್ರಿ ನೀಡಿದರು. ಈ ಚಿತ್ರ ಯಶಸ್ಸು ಗಳಿಸಿ, ನಿರ್ದೇಶಕರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. 2009ರಲ್ಲಿ 'ಎದ್ದೇಳು ಮಂಜುನಾಥ' ಸಿನಿಮಾ ನಿರ್ದೇಶಿಸಿದರು. ಈ ಚಿತ್ರವೂ ಕೂಡ ಭಾರಿ ಯಶಸ್ಸು ಗಳಿಸಿತು. 'ಎದ್ದೇಳು ಮಂಜುನಾಥ' ಸಿನಿಮಾಗೆ ಬೆಸ್ಟ್ ಡೈರೆಕ್ಟರ್ ಫಿಲ್ಮ್‌ಫೇರ್ ಪ್ರಶಸ್ತಿ ಬಂದಿತ್ತು. ಇವೆರಡೂ ಚಿತ್ರದಲ್ಲಿ ಜಗ್ಗೇಶ್ ನಾಯಕರಾಗಿ ನಟಿಸಿದ್ದರು. ಮಠ ಜಗ್ಗೇಶ್ ಅವರ 100ನೇ ಚಿತ್ರವಾಗಿತ್ತು.