'ಭೀಮ' ಚಿತ್ರದಲ್ಲಿ ಗಿರಿಜಾ ಎಂಬ ಖಡಕ್ ಲೇಡಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದ ಪ್ರಿಯಾ ಇದೀಗ 'ಕಸ್ಟಡಿ' ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಜೆ.ಜೆ. ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಬೆಂಗಳೂರಿನ ಟೊರಿನೊ ಫ್ಯಾಕ್ಟರಿ ಆವರಣದಲ್ಲಿ ನಡೆಯುತ್ತಿದೆ. ಸಿನಿಮಾ ಬಗ್ಗೆ ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಜೆ.ಜೆ. ಶ್ರೀನಿವಾಸ್ ಮಾತನಾಡಿ, 'ಕಸ್ಟಡಿಯು ಸೈಬರ್ ಕ್ರೈಂ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಬಳಸುವ ಮೊಬೈಲ್ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಸೈಬರ್ ಕ್ರೈಂ ಕುರಿತಾದ ಕಥೆಗಳು ಸಾಕಷ್ಟು ಬಂದಿವೆಯಾದರೂ ಈ ಕಥೆ ಸ್ವಲ್ಪ ವಿಭಿನ್ನವಾಗಿದೆ. ಒಂದು ವರ್ಷದ ಹಿಂದೆ ಚಿತ್ರದ ಕಥೆ ಸಿದ್ಧವಾಗಿತ್ತು. ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಅನ್ವೇಷಣೆಯಲ್ಲಿದ್ದಾಗ 'ಭೀಮ' ಖ್ಯಾತಿಯ ಪ್ರಿಯಾ ಅವರು ಈ ಪಾತ್ರ ಮಾಡಬಹುದು ಅನಿಸಿತು. ಪ್ರಿಯಾ ಅವರು ಕಥೆ ಕೇಳಿ ಒಪ್ಪಿಕೊಂಡರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭಿಸಲಾಯಿತು. ಈಗ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಕಾಕ್ರೋಜ್ ಸುಧೀ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಸಹ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿದ್ದೇನೆ'' ಎಂದು ತಿಳಿಸಿದರು.
ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ:ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್ ಮಾತನಾಡಿ, ''ನಮ್ಮ ಸಂಸ್ಥೆಯ ಮೂಲಕ "ಗಜಾನನ ಗ್ಯಾಂಗ್" ಸೇರಿದಂತೆ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದೇನೆ. "ಕಸ್ಟಡಿ" ಐದನೇ ಚಿತ್ರ. ಸ್ನೇಹಿತ ಜೆ.ಜೆ. ಶ್ರೀನಿವಾಸ್, ಈ ಚಿತ್ರದ ಕಥೆ ಹೇಳಿದರು. ಕಥೆ ಇಷ್ಟವಾಯಿತು. ಈ ಚಿತ್ರದ ಪ್ರಮುಖಪಾತ್ರವನ್ನು ಭೀಮ ಖ್ಯಾತಿಯ ಪ್ರಿಯಾ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದರು. ಪ್ರಿಯಾ ಅವರ ಪತಿ ಅವಿನಾಶ್ ನನ್ನ ಮಿತ್ರ. ಅವರ ಮೂಲಕ ಪ್ರಿಯಾ ಅವರನ್ನು ಸಂಪರ್ಕ ಮಾಡಿ, ಈ ಚಿತ್ರದ ಕಥೆ ಹೇಳಲಾಯಿತು. ಅವರು ಒಪ್ಪಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ'' ಎಂದರು.