ಹೈದರಾಬಾದ್: ಬಾಹುಬಲಿ ಚಿತ್ರಗಳ ಮೂಲಕ ಭಾರತದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂದೆನಿಸಿಕೊಂಡಿರುವ ಡಾರ್ಲಿಂಗ್ ಪ್ರಭಾಸ್ ಇಂದು ತಮ್ಮ 45ನೇ ವರ್ಷದ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಟಾಲಿವುಡ್ ಸ್ಟಾರ್, ಬುಜ್ಜಿ ಪ್ರಭಾಸ್ ಜನ್ಮದಿನವನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ಪ್ರಭಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ಸಂದರ್ಭ ಅವರ ಸಿನಿಪಯಣ, ಭಾರತೀಯ ಚಿತ್ರರಂಗದಲ್ಲಿ ಅವರು ಮೂಡಿಸಿರುವ ಛಾಪನ್ನು ಪ್ರತಿಬಿಂಬಿಸುವ ಕ್ಷಣವಾಗಿದೆ. ಪ್ರಾದೇಶಿಕವಾಗಿ ಖ್ಯಾತಿ ಗಳಿಸಿದ್ದ, ಫ್ಯಾನ್ಬೇಸ್ ಹೊಂದಿದ್ದ ನಟ ಪ್ರಭಾಸ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ಡಮ್ ಹೊಂದಿರುವ ಸೆಲೆಬ್ರಿಟಿಯಾಗಿ ಮಾರ್ಪಟ್ಟಿದ್ದಾರೆ. ನಾಯಕ ನಟನಾಗಿ ಅವರ ಅಪ್ರತಿಮ ವರ್ಚಸ್ಸು ಹಾಗೂ ಅಭಿನಯಕ್ಕಾಗಿ ಅವರನ್ನು ಅವರು ಸಮರ್ಪಿಸಿಕೊಂಡಿರುವ ರೀತಿ ಅವರನ್ನು ವಿಶ್ವಾದ್ಯಂತ ಪ್ರೇಕ್ಷಕರು ಪ್ರೀತಿಸುವಂತೆ ಮಾಡಿದೆ ಎಂದರೂ ತಪ್ಪಾಗಲಾರದು.
ಮುಂದಿವೆ 2100 ಕೋಟಿ ರೂ. ಬಜೆಟ್ ಸಿನಿಮಾಗಳು: ಬಾಹುಬಲಿ ಸರಣಿ ಚಿತ್ರಗಳು, ಸಲಾರ್, ಕಲ್ಕಿ 2898 AD ಸಿನಿಮಾಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಪ್ರಭಾಸ್ ಕಮಾಲ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ಕಿಂಗ್ ಮೇಲೆ ನಿರ್ಮಾಪಕರು ದೊಡ್ಡ ಮೊತ್ತದ ಹಣ ಹೂಡಿದ್ದು, ಈಗಾಗಲೇ 5 ಮೆಗಾ ಬಜೆಟ್ ಸಿನಿಮಾಗಳನ್ನು ಡಾರ್ಲಿಂಗ್ ಒಪ್ಪಿಕೊಂಡಿದ್ದಾರೆ. ಈ 5 ಸಿನಿಮಾಗಳ ಒಟ್ಟು ಬಜೆಟ್ ಕೇಳಿದರೆ ಶಾಕ್ ಆಗ್ತೀರಾ! ಐದು ಸಿನಿಮಾಗಳ ಒಟ್ಟು ಬಜೆಟ್ 2,100 ಕೋಟಿ ರೂ. ಇವುಗಳಲ್ಲಿ ಎಲ್ಲ ಸಿನಿಮಾಗಳು 300 ಕೋಟಿಗಿಂತ ಹೆಚ್ಚು ಬಜೆಟ್ ಹೊಂದಿದ್ದು, ಒಂದು ಸಿನಿಮಾ 700 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ಈ ಸಿನಿಮಾ ಇದುವರೆಗೆ ಮಾಡಿದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ. ಈ ಮೂಲಕ ಪ್ರಭಾಸ್ ಸಮಕಾಲೀನ ಭಾರತೀಯ ಚಿತ್ರರಂಗದ ಸಿನಿಮೀಯ ಐಕಾನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ.
ಪೌರಾಣಿಕ ಮಹಾಕಾವ್ಯ ಬಾಹುಬಲಿ ಸರಣಿ ಚಿತ್ರಗಳಿಂದ ಹಿಡಿದು ಕಲ್ಕಿ 2898 AD ವರೆಗೆ ಅವರ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿನ ದಾಖಲೆಗಳನ್ನು ಸರಿಗಟ್ಟಿವೆ. ಈ ಮೂಲಕ ಡಾರ್ಲಿಂಗ್ ಪ್ರಭಾಸ್ ಭಾರತ ಮತ್ತು ವಿದೇಶಗಳಲ್ಲೂ ಬೃಹತ್ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಂದಿಗೂ ಆ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಇತ್ತೀಚಿನ ಸಿನಿಮಾ ಕಲ್ಕಿ ಜಾಗತಿಕವಾಗಿ 110 ಕೋಟಿ ರೂ. ಗಳಿಸಿ, ಅಪ್ರತಿಮ ಸ್ಟಾರ್ಡಮ್ ಸಾಬೀತುಪಡಿಸಿದೆ.
ಸಲಾರ್: 2- ಶೌರ್ಯಂಗ ಪರ್ವಂ: ಪ್ರಶಾಂತ್ ನೀಲ್ ಅವರು ಬರೆದು ನಿರ್ದೇಶಿಸುತ್ತಿರುವ ಹೈ ವೋಲ್ಟೇಜ್ ಆ್ಯಕ್ಷನ್ ಡ್ರಾಮಾ ಸಲಾರ್ 2 ಶೌರ್ಯಂಗ ಪರ್ವಂ ಹಾಗೂ ಕಬೀರ್ ಸಿಂಗ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದಲ್ಲಿ ಬರುತ್ತಿರುವ ಸ್ಪಿರಿಟ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆ ಇದೆ. ಸಲಾರ್ 2 ಸಿನಿಮಾ 360 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಲಿದೆ. ಸಂದೀಪ್ ರೆಡ್ಡಿ ವಂಗಾ ಅವರ ಜೊತೆಗೆ ಪ್ರಭಾಸ್ ಮೊದಲ ಬಾರಿಗೆ ಕೈ ಜೋಡಿಸಿದ್ದಾರೆ. ಸ್ಪಿರಿಟ್ ಸಿನಿಮಾ 300 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಲಿದೆ.
320 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಲಿರುವ, ಹನು ರಾಘವಪುಡಿ ನಿರ್ದೇಶನದ ಐತಿಹಾಸಿಕ ಕಾಲ್ಪನಿಕ ಕಥೆ ಫೌಜಿ, ಹಾಗೂ 400 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಲಿರುವ ಮಾರುತಿ ನಿರ್ದೇಶನದ ದಿ ರಾಜಾಸಾಬ್ ಸಿನಿಮಾಗಳ ಮೂಲಕ ಪ್ರಭಾಸ್ ಅವರ ಬಹುಮುಖ ಪ್ರತಿಭೆ ಅನಾವರಣಗೊಳ್ಳಲಿದೆ. ಕಲ್ಕಿ 2 ಸಿನಿಮಾದ ಚಿತ್ರೀಕರಣವನ್ನು ಚಿತ್ರತಂಡ 2025ರ ಫೆಬ್ರವರಿಯಲ್ಲಿ ಪ್ರಾರಂಭಿಸುವ ಪ್ಲಾನ್ನಲ್ಲಿದೆ. ಈ ಸಿನಿಮಾ 700 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಲಿದೆ.
ಬಾಕ್ಸ್ ಆಫೀಸ್ನಲ್ಲಿ ರೆಕಾರ್ಡ್ ಬ್ರೇಕಿಂಗ್: ಬಾಹುಬಲಿ: ದಿ ಬಿಗಿನಿಂಗ್ ಸಿನಿಮಾ ತನ್ನ ಆರಂಭಿಕ ದಿನವೇ 75 ಕೋಟಿ ರೂ. ಗಳಿಸಿತ್ತು. ಬಾಹುಬಲಿ: ದಿ ಕನ್ಕ್ಲೂಷನ್ ಮೊದಲ ದಿನವೇ 200 ಕೋಟಿ ರೂ ಬಾಚುವ ಮೂಲಕ ಆವರೆಗಿನ ಎಲ್ಲಾ ದಾಖಲೆಗಳನ್ನು ಪುಡಿ ಮಾಡಿತ್ತು. ಬಾಹುಬಲಿ ಬಳಿಕ ಪ್ರಭಾಸ್ ಅವರ ಆ್ಯಕ್ಷನ್ ಥ್ರಿಲ್ಲರ್ ಸಾಹೋ ಬೃಹತ್ ಗಳಿಕೆ ಕಂಡಿತು. ಈ ಸಿನಿಮಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಪ್ರತಿ ಸಿನಿಮಾಗಳ ಮೂಲಕ ತನ್ನ ಶಕ್ತಿಯನ್ನು ಸಾಬೀತು ಮಾಡುತ್ತಿರುವ ಪ್ರಭಾಸ್, ಚಿತ್ರರಂಗದಲ್ಲಿ ಅತ್ಯಂತ ಗಳಿಕೆಯ ನಾಯಕ ನಟರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ.
ಮಿಲಿಯನ್ಗಟ್ಟಲೆ ಅಭಿಮಾನಿಗಳ ಪ್ರೀತಿಯ, ಸಹೃದಯಿ ಸೂಪರ್ ಸ್ಟಾರ್: ಅವರ ಆನ್-ಸ್ಕ್ರೀನ್ ಯಶಸ್ಸಿನ ಆಚೆಗೆ, ಪ್ರಭಾಸ್ ಅವರ ನಮ್ರತೆ ಮತ್ತು ಡೌನ್ ಟು ಅರ್ಥ್ ವ್ಯಕ್ತಿತ್ವಕ್ಕಾಗಿ ಲಕ್ಷಾಂತರ ಜನರು ಅವರನ್ನು ಆರಾಧಿಸುತ್ತಾರೆ. ಅವರ ಅಭಿಮಾನಿಗಳು ಅವರನ್ನು ಪ್ರೀತಿಯಿಂದ "ಡಾರ್ಲಿಂಗ್" ಎಂದು ಕರೆಯುತ್ತಾರೆ. ಏಕೆಂದರೆ ತಮ್ಮ ಸಿಬ್ಬಂದಿಗೆ ಆಹಾರವನ್ನು ತರುವುದರಿಂದ ಹಿಡಿದು ವಿವಿಧ ದತ್ತಿ ಕಾರ್ಯಗಳಿಗೆ ಉದಾರ ದೇಣಿಗೆ ನೀಡುವವರೆಗೆ ಮಾನವೀಯ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅವರ ಜಾಗತಿಕ ಖ್ಯಾತಿಯ ಹೊರತಾಗಿಯೂ, ಪ್ರಭಾಸ್ ಅವರದು ಯಾರು ಬೇಕಾದರೂ ಮಾತನಾಡಿಸುವಂತಹ ವ್ಯಕ್ತಿತ್ವ.
ಇದನ್ನೂ ಓದಿ: ವಾರಕ್ಕೂ ಮೊದಲೇ ಮನೀಶ್ ಮಲ್ಹೋತ್ರಾ ಮನೆಯಲ್ಲಿ ದೀಪಾವಳಿ ಸಡಗರ: ಬೆಳಕಿನ ಜೊತೆಗೆ ಫ್ಯಾಷನ್ ಸಂಭ್ರಮ