ಕಜಾನ್ (ರಷ್ಯಾ): ಗಡಿ ವಿಷಯದಲ್ಲಿ ಮುನಿಸಿಕೊಂಡಿದ್ದ ಭಾರತ-ಚೀನಾ ಸಂಬಂಧ ಮತ್ತೆ ಹಳಿ ಏರುವ ಸೂಚನೆ ದಟ್ಟವಾಗಿದೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಕೈ ಕುಲುಕಿ ಸಂಕ್ಷಿಪ್ತ ಸಂಭಾಷಣೆ ನಡೆಸಿದರು. ಬಳಿಕ ಉಭಯ ರಾಷ್ಟ್ರಗಳ ನಡುವೆ ಐದು ವರ್ಷಗಳ ಬಳಿಕ ಪೂರ್ಣಾವಧಿ ದ್ವಿಪಕ್ಷೀಯ ಸಭೆ ನಡೆಯಿತು.
ಕೆಲ ದಿನಗಳ ಹಿಂದಷ್ಟೇ ಪೂರ್ವ ಲಡಾಖ್ನಲ್ಲಿ ಎರಡೂ ರಾಷ್ಟ್ರಗಳ ಸೇನೆಗಳು ಗಡಿ ಗಸ್ತು ತಿರುಗಲು ಒಪ್ಪಿಗೆ ಸೂಚಿಸಿದ ಬಳಿಕದ, ನಾಯಕರ ನಡುವಿನ ಮೊದಲ ಸಭೆ ಇದಾಗಿದೆ. ಭಾರೀ ಕುತೂಹಲ ಮೂಡಿಸಿದ್ದ ದ್ವಿಪಕ್ಷೀಯ ಮಾತುಕತೆಯಲ್ಲಿ ಗಡಿ ಶಾಂತಿ ಬಗ್ಗೆ ಚರ್ಚೆ ನಡೆದಿದೆ.
Met President Xi Jinping on the sidelines of the Kazan BRICS Summit.
— Narendra Modi (@narendramodi) October 23, 2024
India-China relations are important for the people of our countries, and for regional and global peace and stability.
Mutual trust, mutual respect and mutual sensitivity will guide bilateral relations. pic.twitter.com/tXfudhAU4b
ಪ್ರಧಾನಿ ಮೋದಿ ಹೇಳಿದ್ದೇನು? ಭಾರತ- ಚೀನಾ ಬಾಂಧವ್ಯವು ಉಭಯ ರಾಷ್ಟ್ರಗಳ ನಾಗರಿಕರಿಗೆ ಮಾತ್ರವಲ್ಲ, ಜಾಗತಿಕ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಬಹಳ ಮುಖ್ಯ ಎಂದು ನಾವು ನಂಬುತ್ತೇವೆ. ಈವರೆಗೆ ಉಂಟಾದ ಸಮಸ್ಯೆಗಳ ಬಗ್ಗೆ ಒಮ್ಮತ ಮೂಡಿದ್ದನ್ನು ದೇಶ ಸ್ವಾಗತಿಸುತ್ತದೆ. ಗಡಿಯಲ್ಲಿ ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಸಂವೇದನಾಶೀಲತೆ ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದರು.
ಗಡಿ ಒಪ್ಪಂದಕ್ಕೆ ಅಧಿಕೃತ ಮುದ್ರೆ: ಪೂರ್ವ ಲಡಾಖ್ನಲ್ಲಿ ಗಡಿ ಗಸ್ತು ವಿಚಾರವಾಗಿ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆ ಹಾಡಿ, ಉಭಯ ಸೇನೆಗಳ ಮಧ್ಯೆ ಏರ್ಪಟ್ಟ ಒಪ್ಪಂದಕ್ಕೆ ಉಭಯ ನಾಯಕರು ಅಧಿಕೃತ ಮುದ್ರೆ ಒತ್ತಿದರು. ಪರಸ್ಪರ ದೇಶಗಳ ನಡುವಿನ ಗೌರವ, ಗಡಿ ರಕ್ಷಣೆ ಮಾಡಿಕೊಳ್ಳುವ ಮೂಲಕ ಶಾಂತಿಯುತ ಮತ್ತು ಸ್ಥಿರ ಸಂಬಂಧವನ್ನು ಹೊಂದಲು ನಾಯಕರು ಸಹಮತ ವ್ಯಕ್ತಪಡಿಸಿದರು.
ಭಾರತ ಮತ್ತು ಚೀನಾದ ಗಡಿಗೆ ಸಂಬಂಧಿಸಿದ ವಿಶೇಷ ಪ್ರತಿನಿಧಿಗಳು ವಿವಾದ ಪರಿಹರಿಸುವಲ್ಲಿ ಹಾಗೂ ಗಡಿಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಇಬ್ಬರೂ ನಾಯಕರು ಹೇಳಿದರು.
ಸಭೆಯ ನಂತರ ಮಾಹಿತಿ ಹಂಚಿಕೊಂಡ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ವಿಶೇಷ ಪ್ರತಿನಿಧಿಗಳು ಬೇಗನೆ ಸಭೆ ನಡೆಸಿ, ತಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಮೋದಿ ಮತ್ತು ಕ್ಸಿ ಜಿನ್ಪಿಂಗ್ ಅವರು ಸೂಚನೆ ನೀಡಿದರು ಎಂದರು.
ವಿಶೇಷ ಪ್ರತಿನಿಧಿಗಳ ಮುಂದಿನ ಸಭೆಯಲ್ಲಿ ಸೂಕ್ತ ದಿನಾಂಕದಂದು ನಡೆಸುವ ಭರವಸೆ ಇದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧವು ಸ್ಥಿರವಾಗಿದ್ದರೆ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಯ ಮೇಲೆ ಪೂರಕವಾದ ಪರಿಣಾಮ ಉಂಟಾಗುತ್ತದೆ ಎಂಬ ಅಭಿಪ್ರಾಯವನ್ನು ಇಬ್ಬರು ನಾಯಕರು ವ್ಯಕ್ತಪಡಿಸಿದರು ಎಂದು ಮಿಸ್ರಿ ತಿಳಿಸಿದರು.
ಐದು ವರ್ಷಗಳ ಬಳಿಕ ಸಭೆ: ಇದೇ ವೇಳೆ, ಉಭಯ ರಾಷ್ಟ್ರಗಳ ನಡುವೆ ಬರೋಬ್ಬರಿ ಐದು ವರ್ಷಗಳ ಬಳಿಕ ದ್ವಿಪಕ್ಷೀಯ ಸಭೆ ನಡೆದಿದೆ. 2019 ರಲ್ಲಿ ಬ್ರೆಜಿಲ್ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಕೊನೆಯದಾಗಿ ಅಧಿಕೃತ ಸಭೆ ನಡೆದಿತ್ತು. ಅದಾದ ಬಳಿಕ ಹಲವು ಔಪಚಾರಿಕ ಮಾತುಕತೆಗಳು ನಡೆದರೂ ರಾಷ್ಟ್ರಗಳ ನಡುವೆ ಮುನಿಸು ಮುಂದುವರೆದಿತ್ತು.
ಇದನ್ನೂ ಓದಿ: ಉಗ್ರವಾದದ ಬಗ್ಗೆ ದ್ವಿಮುಖ ನೀತಿ ಬೇಡ: ಬ್ರಿಕ್ಸ್ ಶೃಂಗದಲ್ಲಿ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಚಾಟಿ