ಚಿಕ್ಕಬಳ್ಳಾಪುರ: ನಗರದ ವಾಸಿಗಳ ಕುಡಿಯುವ ನೀರಿನ ಕಣಜ ಜಕ್ಕಲಮುಡುಗು ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಬುಧವಾರ ಶಾಸಕರು, ಸಂಸದರು ಬಾಗಿನ ಅರ್ಪಣೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ವೇಳೆ, 20ಕ್ಕೂ ಅಧಿಕ ಜನರ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಬುಧವಾರ ಬೆಳಗ್ಗೆ ಬಾಗಿನ ಅರ್ಪಿಸಿದ ಶಾಸಕ ಪ್ರದೀಪ್ ಈಶ್ವರ್ ಅಲ್ಲಿಂದ ಮಂಚೇನಹಳ್ಳಿ ಕಡೆ ಹೊರಟಿದ್ದರು. ಬಳಿಕ 11 ಗಂಟೆಗೆ ಬಾಗಿನ ಅರ್ಪಿಸಲು ಸಂಸದ ಸುಧಾಕರ್ ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದರು. ಎರಡು ಮೂರು ಸಲ ಮುಂದೂಡಿದ್ದ ಅವರು, ಸಂಜೆ 4 ಗಂಟೆಗೆ ನಿಗದಿಗೊಳಿಸಿದ್ದರು. ಹೀಗಾಗಿ, ವೇಳೆ ಸುಧಾಕರ್ ಬೆಂಬಲಿಗರು ಕೆಲವು ನಗರಸಭಾ ಅಧಿಕಾರಿಗಳು ಅಲ್ಲಿಗೆ ಜಮಾಯಿಸಿದ್ದರು. ಸುಧಾಕರ್ ಅಲ್ಲಿಗೆ ಬರುವುದಕ್ಕೂ ಮುಂಚೆ ಚಿಕ್ಕಬಳ್ಳಾಪುರ ವಾಟರ್ ಪಂಪ್ ಹೌಸ್ ಬಳಿ ಪೂಜೆಗಾಗಿ ಕಾಯುತ್ತಿದ್ದರು. ಇದೇ ವೇಳೆ ಹೆಜ್ಜೇನು ಹುಳುಗಳು ಸುಮಾರು 20ಕ್ಕೂ ಅಧಿಕ ಜನರ ಮೇಲೆ ದಾಳಿ ಮಾಡಿವೆ.
ಇದರಿಂದ, ಕೆಲವು ಮುಖಂಡರು, ಅಧಿಕಾರಿಗಳು ಜೇನು ನೊಣಗಳಿಂದ ಕಚ್ಚಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಕೇಲವೇ ಕ್ಷಣದಲ್ಲಿ ಬರಬೇಕಿದ್ದ ಸಂಸದ ಸುಧಾಕರ್ ಮಾಹಿತಿ ತಿಳಿದು ಆಗಮಿಸಿಲ್ಲ. ಘಟನೆಯಲ್ಲಿ ಕೆಲವರು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.