ಬೆಂಗಳೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಟೀಂಗೆ ಹೈಕಮಾಂಡ್ ಭೇಟಿಗೆ ಅವಕಾಶ ಸಿಗದ ಕಾರಣ ದೆಹಲಿಯಿಂದ ವಾಪಸ್ ಆಗಿದೆ.
ಇನ್ನು ಮಂಗಳವಾರ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕುಮಾರ್ ಬಂಗಾರಪ್ಪ ಅವರು ಕೆಲವು ದೆಹಲಿ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಿತ್ತು. ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಸಂಸದ ಸಿದ್ದೇಶ್ವರ್ ನೇತೃತ್ವದ ತಂಡ ವರಿಷ್ಠರ ಭೇಟಿಗೆ ಯತ್ನಿಸುತ್ತಿದೆ.
ಇಡೀ ಲಿಂಗಾಯತ ಸಮುದಾಯ ಬಿ.ವೈ. ವಿಜಯೇಂದ್ರ ಹಿಂದೆ ಇಲ್ಲ. ಬಿ.ಎಸ್. ಯಡಿಯೂರಪ್ಪ ವರ್ಚಸ್ಸು ವಿಜಯೇಂದ್ರಗೆ ಇಲ್ಲ. ವಿಜಯೇಂದ್ರ ಬದಲಿಸಿದರೆ ಯಾವುದೇ ಹಿನ್ನಡೆ ಆಗುವುದಿಲ್ಲ ಎನ್ನುತ್ತಿರುವ ಬಣ, ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಬದಲಿಸುವಂತೆ ಮನವಿ ಮಾಡಲಿದೆ. ಜೊತೆಗೆ ತಟಸ್ಥ ಗುಂಪಿನಲ್ಲಿರುವ ನಾಯಕರು ಕೂಡ ಬೆಂಬಲ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಯತ್ನಾಳ್ ತಂಡ ಇದೆ. ಈ ಮಧ್ಯೆ ಯತ್ನಾಳ್ ಬಣ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ರೆಬಲ್ ಟೀಂ ಬೇಡಿಕೆ ಏನು?: ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮುಕ್ತ ಹಾಗೂ ಹಿಂದುತ್ವದ ವಿರೋಧಿಗಳನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇದರ ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷ ಸಿದ್ಧಾಂತ ಎಂಬ ಬೇಡಿಕೆಯನ್ನೂ ಬಿಜೆಪಿ ಹೈಕಮಾಂಡ್ ಮುಂದೆ ಯತ್ನಾಳ್ ಟೀಂ ಇಟ್ಟಿದೆ ಎನ್ನಲಾಗಿದೆ.
ಎಲ್ಲ ಲಿಂಗಾಯತರು ಬಿ.ಎಸ್.ಯಡಿಯೂರಪ್ಪ ಪರವಾಗಿಲ್ಲ: ದೆಹಲಿಯಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಮ್ಮ ಕೆಲವು ನಾಯಕರು ಕೆಲವರನ್ನು ಮಂಗಳವಾರ ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿ.ಎಸ್. ಯಡಿಯೂರಪ್ಪ ಪರವಾಗಿಲ್ಲ. ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಮಾಜಿ ಸಂಸದ ಸಿದ್ದೇಶ್ವರ್, ಅವರ ವಾಸಕ್ಕೆ ಮನೆ ಬಿಟ್ಟು ಕೊಟ್ಟ ಮಲ್ಲಿಕಾರ್ಜುನಯ್ಯ, ಅನಂತಕುಮಾರ್, ಬಿಬಿ ಶಿವಪ್ಪ ಮೊದಲಾದವರನ್ನೆಲ್ಲ ತುಳಿದ ಯಡಿಯೂರಪ್ಪ ಅವರನ್ನು ಉಳಿಸುವುದು ಈಗ ಯಾರಿಂದಲೂ ಸಾಧ್ಯವಿಲ್ಲ. ಇಬ್ಬರು ಮೂವರು ಪೇಮೆಂಟ್ ಸ್ವಾಮೀಜಿಗಳು ಅವರ ಜೊತೆಗಿದ್ದಾರೆ ಅಷ್ಟೇ ಎಂದರು.
ವಿಜಯೇಂದ್ರ, ಬಿಎಸ್‌ವೈ ಅವರ ನಕಲಿ ಸಹಿ ಮಾಡಿದ್ದಾರೆ. ವಿಜಯೇಂದ್ರ ಕರ್ಮಕಾಂಡ ಬಹಳ ಇದೆ. ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ರು. ನನ್ನ ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ಮೂರ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯ ಆಗಬೇಕು. ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನ್ ಮಾಡಿದರು?. ನಮ್ಮ ತಂಡದಲ್ಲಿ ಕುಟುಂಬ ರಾಜಕೀಯ ಇಲ್ಲ. ಸಿದ್ದೇಶ್ವರ್, ಲಿಂಬಾವಳಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರ ಮನೆಯವರು ಸ್ಪರ್ಧೆ ಮಾಡಿದ್ದಾರೆ. ಒಂದೇ ಮನೆಯಲ್ಲಿ ಎಲ್ಲ ಅಧಿಕಾರ ಅನುಭವಿಸುತ್ತಿಲ್ಲ. ಕಾಂಗ್ರೆಸ್ ಕೊಟ್ಟ ಭಿಕ್ಷೆ ಮತ್ತು ಡಿಕೆ ಶಿವಕುಮಾರ್ ಆಶೀರ್ವಾದದಿಂದ ವಿಜಯೇಂದ್ರ ಶಾಸಕರಾಗಿದ್ದಾರೆ. ರಮೇಶ್ ಜಾರಕಿಹೋಳಿ ಪಕ್ಷ ಗಟ್ಟಿ ಮಾಡಲು ಬಂದವರು. ವಿಜಯೇಂದ್ರ ಏನು ಮಾಡಿದ್ದಾರೆ ಎಂದು ಯತ್ನಾಳ್ ಪ್ರಶ್ನೆ ಮಾಡಿದರು.
ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡದಿದ್ದರೆ ಏನು ಮಾಡಬೇಕೆಂದು ಮುಂದೆ ಹೇಳುತ್ತೇವೆ. ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ. ಆದರೆ ಕೆಲವರನ್ನು ಕೆಲವು ಕಾಲ ಮೋಸ ಮಾಡಬಹುದು. ಕೆಲವರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಬಹುದು. ಎಲ್ಲರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿಲ್ಲ. ಯಾವುದೇ ಸಮುದಾಯದ ನಾಯಕರು ಅಧ್ಯಕ್ಷರಾಗಬಹುದು. ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇನೆ. ಅವರು ಹೇಳಿದ ತಕ್ಷಣ ತಿಳಿಸುವುದಾಗಿ ಹೇಳಿದರು.
ಯಡಿಯೂರಪ್ಪ ಹೊಸ ನಾಟಕ ಕಂಪನಿ ತೆಗೆದಿದ್ದಾರೆ. ಅನಾರೋಗ್ಯ ಎಂದು ನಾಟಕ ಮಾಡುತ್ತಿದ್ದಾರೆ. ಅನಾರೋಗ್ಯ ಇಲ್ಲದವರು ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಹೇಗೆ ಭೇಟಿ ಮಾಡಿದರು. ಎಲ್ಲರನ್ನು ಕರೆಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಎಂದ ಯತ್ನಾಳ್ ದೂರಿದರು.
ಫೆ.10 ರ ಬಳಿಕ ಒಳ್ಳೆ ಸುದ್ದಿ: ದೆಹಲಿಯಲ್ಲಿ ಮಾಜಿ ಸಂಸದ ಸಿದ್ದೇಶ್ವರ್ ಮಾತನಾಡಿ, ರಾಷ್ಟ್ರ ನಾಯಕರು ಫೆ.10 ರ ಬಳಿಕ ಒಳ್ಳೆ ಸುದ್ದಿ ಕೊಡುತ್ತಾರೆ. ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ ಎಂದು ಹೇಳಿದರು.
ದೆಹಲಿಯಿಂದ ಹೊರಟ ಯತ್ನಾಳ್ ಅಂಡ್ ಟೀಮ್, ಮತ್ತೆ ಫೆ.9 ಕ್ಕೆ ತೆರಳಲು ತೀರ್ಮಾನ ಮಾಡಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಹಾಕುಂಭಕ್ಕೆ ಹೋದರೆ, ಬಸನಗೌಡ ಪಾಟೀಲ್ ಯತ್ನಾಳ್ ಹೈದರಾಬಾದ್ ಮೂಲಕ ಪ್ರಯಾಣ ಮಾಡಿದ್ದು, ರಮೇಶ್ ಜಾರಕಿಹೊಳಿ ಬೆಂಗಳೂರನತ್ತ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ನಿಲ್ಲದ ಬಣ ಬಡಿದಾಟ; ವಿಜಯೇಂದ್ರ ಬೆಂಬಲಿಗರ ಸಭೆ; ಭಿನ್ನರ ಉಚ್ಚಾಟನೆಗೆ ಆಗ್ರಹ
ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗಿ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದ ಬಿ.ವೈ. ವಿಜಯೇಂದ್ರ; 8 - 10 ದಿನದಲ್ಲಿ ಚುನಾವಣೆ