ಚಂದೌಲಿ(ಉತ್ತರ ಪ್ರದೇಶ): ನೆರೆಮನೆಯವರ ನಡುವೆ ಜಗಳವಾಗಿ 34 ವರ್ಷದ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 90 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ನಡೆಯಲೂ ಸಾಧ್ಯವಾಗದ ವೃದ್ಧನನ್ನು ಆಂಬ್ಯುಲೆನ್ಸ್ನಲ್ಲಿ ಕರೆದೊಯ್ದು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯ ಪರಿಸ್ಥಿತಿ ಕಂಡು ನ್ಯಾಯಾಧೀಶರು ತಕ್ಷಣಕ್ಕೆ ಜಾಮೀನು ಮಂಜೂರು ಮಾಡಿದ್ದಾರೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ. ಹಳೆಯ ಪ್ರಕರಣವನ್ನು ಇತ್ಯರ್ಥ ಮಾಡುವ ಸಲುವಾಗಿ ಕೋರ್ಟ್, ಆರೋಪಿಯನ್ನು ಬಂಧಿಸಿ ತರುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ, ಆರೋಪಿಯನ್ನು ಕಂಡು ಕೋರ್ಟು ಜಾಮೀನು ನೀಡಿ ಕಳುಹಿಸಿ, ಪ್ರಕರಣವನ್ನು ರದ್ದುಗೊಳಿಸಿತು.
ನಡೆದಿದ್ದಿಷ್ಟು: ಜಿಲ್ಲೆಯ ಅಮರಸಿಪುರ ಗ್ರಾಮದ ನಿವಾಸಿಯಾದ ವೃದ್ಧ ಆರೋಪಿ ಕೇದಾರ ಮಲ್ಲಾ ಮತ್ತು ನೆರೆಮನೆಯವರ ನಡುವೆ ಯಾವುದೋ ವಿಷಯಕ್ಕಾಗಿ 1990ರಲ್ಲಿ ಜಗಳವಾಗಿತ್ತು. ನೆರೆಮನೆಯವರು ಶಹಬ್ಗಂಜ್ ಪೊಲೀಸ್ ಠಾಣೆಯಲ್ಲಿ ನಿಂದನೆ ಮತ್ತು ಹಲ್ಲೆ ದೂರು ನೀಡಿದ್ದರು. ಪೊಲೀಸರು ವಿವಿಧ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದರು.
ತನಿಖೆಯ ಬಳಿಕ ಪೊಲೀಸರು ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರಂಭದಲ್ಲಿ ಕೇದಾರ್ ಮಲ್ಲಾ ಮತ್ತು ದೂರುದಾರರು ಕೋರ್ಟ್ಗೆ ಹಾಜರಾಗಿದ್ದಾರೆ. ತದನಂತರ ಇಬ್ಬರೂ ಕೋರ್ಟ್ಗೆ ಬರುವುದನ್ನು ನಿಲ್ಲಿಸಿದ್ದಾರೆ. ದೂರುದಾರರು ಕೂಡ ವಕಾಲತ್ತು ಸ್ಥಗಿತಗೊಳಿಸಿದ್ದರು.
ಈ ಮಧ್ಯೆ, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ, ಬಾಕಿ ಉಳಿದು ಧೂಳು ಹಿಡಿದಿದ್ದ ಈ ಪ್ರಕರಣದ ಕಡತಗಳು ಹೊರಬಿದ್ದಿವೆ. ಪ್ರಕರಣದ ವಿಚಾರಣೆಯೂ ಮರು ಆರಂಭಗೊಂಡಿದೆ. ಆರೋಪಿತ ಕೇದಾರ್ ಮಲ್ಲಾಗೆ ಈ ವಿಚಾರ ತಿಳಿದಿಲ್ಲ. ಆರೋಪಿಗಳು ನಿಗದಿತ ದಿನಾಂಕಕ್ಕೆ ಪದೇ ಪದೇ ಗೈರಾದ ಕಾರಣ, ನ್ಯಾಯಾಧೀಶರು ಸಿಟ್ಟಿಗೆದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.
ನ್ಯಾಯಾಲಯದ ಆದೇಶದ ಕಾರಣ, ಪೊಲೀಸರು 90 ವರ್ಷದ ಆರೋಪಿಯನ್ನು ಆಂಬ್ಯುಲೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ವೃದ್ಧನ ಸ್ಥಿತಿ ನೋಡಿದ ನ್ಯಾಯಾಧೀಶರು ಕೂಡಲೇ ಜಾಮೀನು ಮಂಜೂರು ಮಾಡಿದರು. ಬಳಿಕ ವೃದ್ಧನನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ