'ರಂಗಿತರಂಗ' ಎಂಬ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾದ ಜೋಡಿ ನಿರೂಪ್ ಭಂಡಾರಿ ಮತ್ತು ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಭಿನ್ನ ಕಥಾವಸ್ತುವನ್ನು ಹೊಂದಿರೋ ಸಿನಿಮಾದಲ್ಲಿ ಮತ್ತೆ ಒಂದಾಗಿರೋದು ನಿಮಗೆ ತಿಳಿದಿರುವ ವಿಚಾರ. ಸಿನಿಮಾಗೀಗ ಅಧಿಕೃತ ಶೀರ್ಷಿಕೆ ಸಿಕ್ಕಿದೆ. ಬಹುನಿರೀಕ್ಷಿತ ಚಿತ್ರದ ಟೈಟಲ್ 'ಸತ್ಯ ಸನ್ ಆಫ್ ಹರಿಶ್ಚಂದ್ರ'. ಈ ಮೂಲಕ ಚಿತ್ರತಂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಶೀರ್ಷಿಕೆ ಬಹಿರಂಗವಾಗಿದೆ. ಮಗನ ಪಾತ್ರದಲ್ಲಿರೋ ನಿರೂಪ್ ಭಂಡಾರಿ ಅವರ ಮೊದಲ ನೋಟ ಆಕರ್ಷಕವಾಗಿದೆ. ಅಪ್ಪನ ಪಾತ್ರದಲ್ಲಿರೋ ಸಾಯಿ ಕುಮಾರ್ ಅವರ ಗತ್ತು ರಾಜ ಗಾಂಭೀರ್ಯದಿಂದ ಕೂಡಿದೆ. ಈ ಫಸ್ಟ್ ಲುಕುನಲ್ಲಿರುವ ''ನನ್ನ ತಂದೆ..... ನನ್ನ ವಿಲನ್'' ಎಂಬ ಬರಹ ನೋಡುಗರ ಕುತೂಹಲ ಕೆರಳಿಸಿದೆ. ನಿರ್ದೇಶಕ ಸಚಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ತಂದೆ ಮತ್ತು ಮಗನ ಕಥಾಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ ಅನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಅನಾವರಣಗೊಳಿಸಿದ್ದಾರೆ. ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನೊಂದಿರುವ 'ಸತ್ಯ ಸನ್ ಆಫ್ ಹರಿಶ್ಚಂದ್ರ' ಸಿನಿಮಾ ಹಾಸ್ಯಮಯವಾಗಿ ಮೂಡಿಬರಲಿದೆ. ಸದ್ಯ ಕೌಟುಂಬಿಕ ಸಿನಿಮಾದಂತೆ ತೋರುತ್ತಿದ್ದು, ಚಿತ್ರೀಕರಣ ತೀರ್ಥಹಳ್ಳಿ ಮತ್ತು ಚೆನ್ನಗಿರಿಯ ಆಸುಪಾಸಿನ ಸುಂದರ ತಾಣದಲ್ಲಿ ಭರದಿಂದ ಸಾಗಿದೆ.