ಪುಣೆ (ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ಇರಿತ ಕುರಿತು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿಕೆಗಳನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ನಾಯಕ ಈ ದಾಳಿ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಟನ ಮೇಲಿನ ದಾಳಿ ನಿಜವೇ ಅಥವಾ ಖಾನ್ ನಟಿಸಿದ್ರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸೈಫ್ ಮೇಲಿನ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಅವರಿಗೆ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ನನಗೆ ಅನುಮಾನವಿತ್ತು" ಎಂದು ತಿಳಿಸಿದ್ದಾರೆ.
"ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ. ಅವರು ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ರು. ಮೊದಲು ಅವರು ರಸ್ತೆಗಳ ಕ್ರಾಸ್ ಬಳಿ ನಿಲ್ಲುತ್ತಿದ್ದರು, ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಬಹುಶಃ ಅವನು ಸೈಫ್ ಅವರನ್ನು ಕರೆದೊಯ್ಯಲು ಬಂದಿದ್ದರೇನೂ. ಒಳ್ಳೆಯದೇ, ಕಸವನ್ನು ತೆಗೆದುಕೊಂಡು ಹೋಗಬೇಕು. ನಟ ಆಸ್ಪತ್ರೆಯಿಂದ ಹೊರಬಂದಾಗ ನಾನು ಅವರನ್ನು ನೋಡಿದೆ. ಆಗ ಅವರಿಗೆ ನಿಜವಾಗಿಯೂ ಚಾಕುವಿನಿಂದ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ಅನುಮಾನವಾಯಿತು. ಅವರು ನಡೆಯುತ್ತಿದ್ದಾಗ ಡ್ಯಾನ್ಸ್ ಮಾಡುತ್ತಿದ್ದರು" ಎಂದು ರಾಣೆ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ನಿತೇಷ್ ರಾಣೆ ಎನ್‌ಸಿಪಿ (ಎಸ್‌ಪಿ) ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಈ ನಾಯಕರು ಸೈಫ್ ಅಲಿ ಖಾನ್, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಹಿಂದೂ ನಟನಿಗೆ ಹಿಂಸೆಯಾದಾಗ ಮುಂದೆ ಬರೋದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಇನ್ಮುಂದೆ ಸಿನಿಮಾ ಮಾಡಲ್ವಾ ರಶ್ಮಿಕಾ ಮಂದಣ್ಣ? ಛಾವಾ ಈವೆಂಟ್ನಲ್ಲಿ ನಿವೃತ್ತಿ ಬಗ್ಗೆ ನಟಿ ಹೇಳಿದ್ದಿಷ್ಟು!
"ಶಾರುಖ್ ಖಾನ್ ಅಥವಾ ಸೈಫ್ ಅಲಿ ಖಾನ್ ಅವರಂತಹ ಖಾನ್ಗಳು ಗಾಯಗೊಂಡಾಗ, ಎಲ್ಲರೂ ಆ ಬಗ್ಗೆ ಪ್ರತಿಕ್ರಿಯಿಸಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ನಂತಹ ಹಿಂದೂ ನಟ ಹಿಂಸೆಗೊಳಗಾದಾಗ, ಯಾರೂ ಪ್ರತಿಕ್ರಿಯಿಸುವುದಿಲ್ಲ. ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ಹಾದ್) ಮತ್ತು ಬರಾಮತಿಯ ತಾಯ್ (ಸುಪ್ರಿಯಾ ಸುಳೆ) ಮಾತನಾಡೋದಿಲ್ಲ. ಅವರು ಸೈಫ್ ಅಲಿ ಖಾನ್, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗುತ್ತಾರೆ. ಎಂದಾದರೂ ಯಾವುದೇ ಹಿಂದೂ ಕಲಾವಿದನ ಬಗ್ಗೆ ಅವರು ಚಿಂತಿಸಿರುವುದನ್ನು ನೀವು ನೋಡಿದ್ದೀರಾ?. ಈ ಎಲ್ಲಾ ವಿಷಯಗಳ ಬಗ್ಗೆ ನೀವು ಗಮನ ಹರಿಸಬೇಕು" ಎಂದು ನಿತೇಶ್ ರಾಣೆ ತಿಳಿಸಿದರು.
ಇದನ್ನೂ ಓದಿ: 'ಆಟೋದಲ್ಲಿ ಸೈಫ್ ನೋವು ಅನುಭವಿಸಿದ್ದರು': ಆಸ್ಪತ್ರೆಯಲ್ಲಿ ನಟನನ್ನು ಭೇಟಿಯಾದ ಚಾಲಕ ಹೇಳಿದ್ದೇನು?
ಇದಕ್ಕೂ ಮೊದಲು, ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ದಾಳಿ ಬಗ್ಗೆ ಪ್ರಶ್ನಿಸಿ ಸೈಫ್ ಕುಟುಂಬ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದರು.